Advertisement

ಸ್ಥಾಯಿಯಾಗಿ ನಿಲ್ಲುವ ಸಂಚಾರಿಭಾವ !

06:00 AM Dec 24, 2017 | |

ಇದನ್ನೆಲ್ಲ ಅರ್ಥ ಮಾಡಿಕೊಳ್ಳೋದು ನನ್ನ ಕೆಲಸ ಅಲ್ಲ, ಅದು ತಾನಾಗಿಯೇ ಗೋಚರವಾಗುತ್ತದೆ ಒಂದು ದಿನ. ನನ್ನ ಪ್ರಯತ್ನ ನುಡಿಸೋದಷ್ಟೆ”- ತನ್ನ ಮೂವತ್ತೈದನೆಯ ವಯಸ್ಸಿಗೆ ಜಗತ್ತಿನ ಬಹುತೇಕ ಭಾಗಗಳಲ್ಲಿ ತನ್ನ ಗಿಟಾರ್‌ ವಾದನದ ಕಛೇರಿಗಳನ್ನು ನೀಡಿರುವ ಮಿತ್ರ ಹೇಳುತ್ತಿದ್ದ. ಆ ನಮ್ಮ ಸಂಭಾಷಣೆ ಶುರುವಾಗಿದ್ದು ರಾಗವೊಂದರ ಸ್ಥಾಯೀ ಭಾವ ಮತ್ತು ಸಂಚಾರೀ ಭಾವದ ಪ್ರಸ್ತುತಿಯ ಕುರಿತು. ಜಗತ್ತಿನ ಎಲ್ಲ ಬಗೆಯ ಸಂಗೀತದ ಅಂತಃಕರಣದ ಬಗೆಯನ್ನು ಮುಖ್ಯವಾಗಿ ಹೀಗೆ ಸ್ಥಾಯೀ ಮತ್ತು ಸಂಚಾರೀ ಎಂಬ ಅಂಗಗಳಿಂದ ನಾವು ಪ್ರತ್ಯೇಕಿಸಬಹುದು ಅಥವಾ ಬೆಸೆಯಬಹುದು ಕೂಡ. 

Advertisement

ನಮ್ಮಲ್ಲಿಯೇ ಸಂಗೀತದ ಕೇಳುಗರ ವರ್ಗ ಮತ್ತು ಪ್ರಭೇದವನ್ನು ಗಮನಿಸಿದರೆ ಧ್ವನಿ ಮತ್ತು ಕೇಳುಗರಿಬ್ಬರನ್ನೂ ಒಳಗೊಳ್ಳುವ ಸಂಗೀತದ ಅದರದ್ದೇ ಆದ ಒಂದು ಅಂತಃಕರಣವು ನಮ್ಮನ್ನು ಆ ಭಾವದ ಹೊಸ ಆಯಾಮದತ್ತ ಕರೆದೊಯ್ಯುತ್ತದೆ. ಆ ಅಂತಃಕರಣವು ಕೇಳುಗ ಮತ್ತು ಸಂಗೀತದ ನಡುವಿನ ಬಂಧವೂ ಹೌದು, ಭಾವವೂ ಹೌದು. 
ಕೆಲವರಿ¨ªಾರೆ, ಶಾಸ್ತ್ರೀಯ ಸಂಗೀತವನ್ನು ಬಿಟ್ಟರೆ ಮತ್ತೇನನ್ನೂ ಕೇಳದ ಸಂಗೀತಪ್ರೇಮಿಗಳು. ಅಂಥ ಕೇಳುಗರಲ್ಲಿ ರಾಗವೊಂದನ್ನು ಆಸ್ವಾದಿಸುವ, ಆಲಾಪ ಮತ್ತು ವಿಲಂಬಿತ ಚಲನೆಯನ್ನು ತೀವ್ರವಾಗಿ ಆನಂದಿಸುವ ಮತ್ತು ದ್ರುತ್‌ ಅತಿದ್ರುತ್‌ನಂಥ ವೇಗದ ಗತಿಗೂ ಮನಸ್ಸನ್ನು ಒಡ್ಡಿ ನಿಲ್ಲುವ ಮಹಾನ್‌ ಗುಣವಿರುತ್ತದೆ. ಗಾಯಕ ಹಾಡುತ್ತಿದ್ದರೆ ಇಂಥ ಕೇಳುಗನ ಮನಸ್ಸು ಕೇಳುತ್ತಿರುವ ರಾಗದಲ್ಲಿಯೇ ನಿಂತಿರುತ್ತದೆಯೋ ಅಥವಾ ಆ ರಾಗದ ನೆಲೆಗಟ್ಟಿನಲ್ಲಿ ನಿಂತು ಹೊಸತೊಂದು ಭಾವದ ಆವಿರ್ಭಾವಕ್ಕೆ ಮನಸ್ಸು ಕಾಯುತ್ತಿರುತ್ತದೆಯೋ ಅಥವಾ ರಾಗದ ಭಾವಾಸ್ವಾದನೆಯ ಜೊತೆಗೆ ತೀರಾ ಪ್ರತ್ಯೇಕವಾದಂಥ ವೈಯಕ್ತಿಕ ಚಲನೆಯಲ್ಲಿ ಮನಸ್ಸು ಹರಿಯುತ್ತಿರುತ್ತದೋ, ಒಟ್ಟಿನಲ್ಲಿ ಇದು ಹೀಗೆಯೇ ಎಂದು ಹೇಳುವುದು ನಿಜಕ್ಕೂ ಕಷ್ಟ. ಈ ಜಗತ್ತಿನಲ್ಲಿ ಎಲ್ಲವೂ ಎಲ್ಲರಿಗೂ ಎಲ್ಲ ಸಮಯದಲ್ಲಿಯೂ ಹೊಂದಲೇಬೇಕೆಂದೇನಿಲ್ಲ. ಆದರೆ, ಅದೇ ಬಡೇ ಗುಲಾಮ್‌ ಅಲಿಯವರ ಯಾದ್‌ ಪಿಯಾ ಕೀ ಆಯೆ ಎಂಬ ಠುಮ್ರಿಯನ್ನು ಅವರ ನಿಜವಾದ ಕೇಳುಗ ಸಾಯುವ ಮೊದಲು ಒಂದು ಲಕ್ಷ ಸರ್ತಿಯಾದರೂ ಕೇಳಿರುತ್ತಾನೆ. ಪ್ರತೀ ಬಾರಿ ಕೇಳುವಾಗಲೂ ಅÇÉೊಂದು ಹೊಸ ವಸ್ತು ಗೋಚರವಾಗುತ್ತದೆ ಆ ಕೇಳುಗನಿಗೆ. ಮತ್ತು ಹಾಗೆ ಗೊಚರವಾದ ಅದೇ ಹೊಸ ವಸ್ತುವು ಮತ್ತೆಂದೋ ಕೇಳುವಾಗ ಮತ್ತೂಂದು ಬದಿಯನ್ನು ತೋರಿಸುತ್ತದೆ. ಇರುವ ಒಂದೇ ಪಂಚಮವು ತನ್ನನ್ನು ಒಳಗೊಳ್ಳುವ, ಬೆಸೆದುಕೊಳ್ಳುವ, ಉಳಿದ ಸ್ವರಗಳನ್ನು ಅವಲಂಬಿಸಿ ಶೃಂಗಾರವನ್ನೂ ತೋರಿಸುತ್ತ ಮತ್ತೂಮ್ಮೆ ಭೀಭತ್ಸವನ್ನೂ ಬಿತ್ತಬಹುದು. ಆ ಸಂದರ್ಭದ ಅಂದರೆ ಕೇಳುವಿಕೆ, ಹಾಡುವಿಕೆ, ಸುತ್ತಲ ವಾತಾವರಣ ಮತ್ತು ಹಾಡುಗ-ಕೇಳುಗ ಇವರಿಬ್ಬರ ಮನಃಸ್ಥಿತಿಯನ್ನೂ ಅವಲಂಬಿಸಿ, ಶೃಂಗಾರ ರಸದ ಆ ರಾಗವು ಏಕಕಾಲಕ್ಕೆ ವಿಪ್ರಲಂಭದ ದುಃಖವನ್ನೂ ಸಂಭೋಗದ ಆನಂದದ ಪರಾಕಾಷ್ಠೆಯನ್ನೂ ದರ್ಶಿಸಬಲ್ಲದು. ಆದರೆ, ಈ ಎಲ್ಲ ಸಂದರ್ಭಗಳಲ್ಲೂ ಎರಡು ಮುಖ್ಯವಾದ ಅಂಗಗಳೆಂದರೆ ರಾಗದ ಸ್ಥಾಯೀಭಾವ ಮತ್ತು ಸಂಚಾರೀ ಭಾವ. ಹಾಡುಗನೂ ಮತ್ತು ಕೇಳುಗನಲ್ಲಿ ಇಬ್ಬರಲ್ಲಿಯೂ ಈ ಭಾವಗಳ ಘರ್ಷಣೆಯಾಗುತ್ತಲೇ ಇರುತ್ತದೆ. ಊರೆಲ್ಲ ಬರಿಗಾಲಿನಲ್ಲಿ ಅಡ್ಡಾಡಿ ಕುಣಿದು ಆಟವಾಡಿ ಮತ್ತೆ ಮನೆಗೆ ಬರುವ ಪುಟ್ಟ ಮಗುವಿನ ರೀತಿ, ಸ್ಥಾಯಿಯಲ್ಲಿ ನಿಂತು ಸಂಚಾರಿಯಾಗುವುದು, ಸಂಚಾರಿಯಾಗಿದ್ದೂ ಆತದ ನಡುವೆ ಬಳಲಿ ನೀರು ಕುಡಿಯಲು ಮನೆಗೆ ಬಂದು ಮತ್ತೆ ಚಿಗುರಿಕೊಳ್ಳುವುದು. 

ಇನ್ನು ಮತ್ತೂಂದು ಪ್ರಕಾರವಿದೆ. ಶಾಸ್ತ್ರೀಯ ಸಂಗೀತವನ್ನು ಎಂದಿಗೂ ಕೇಳಬಯಸದಿರುವ ಕೆಟಗರಿಯ ಸಂಗೀತ ಪ್ರೇಮಿಗಳು. ಇಲ್ಲಿ ಇಂಥವರಿಗೊಂದು ಒಳ್ಳೆಯ ಮೆಲುವಾದ ಹಾಡಿದ್ದರೆ ಸಾಕು, ದಿನವಿಡೀ ಗುನುಗಿಕೊಳ್ಳುತ್ತ ಕಾಲ ಕಳೆಯುತ್ತಾರೆ. ಅಂಥ ಕಾನ್ಸರ್ಟುಗಳಿಗೆ ಸಾವಿರಾರು ರೂಪಾಯಿ ಕೊಟ್ಟು ಹೋಗುತ್ತಾರೆ. ಇಲ್ಲಿ ಇವರಿಗೆ ಸಂಗೀತವೆಂಬುದು ಸಂಚಾರಿಯಾಗಿಯೂ ಸಂಗೀತದಲ್ಲಿರುವ ಸಾಹಿತ್ಯವು ಸ್ಥಾಯಿಯಾಗಿಯೂ ನಿಲ್ಲುತ್ತದೆ ಎಂಬುದು ಮೇಲ್ನೋಟಕ್ಕೆ ನಮಗೆ ಅನ್ನಿಸಿದರೂ ಇವೆರಡನ್ನು ಮೀರಿದ ಸುಮ್ಮನೆ ಶಬ್ದಗಳಲ್ಲಿ ಹೇಳಲಾಗಂಥ ಆನಂದವೊಂದು ಅಲ್ಲಿ ಅಡಗಿರುತ್ತದೆ. ಸಾಮಾನ್ಯವಾಗಿ ಹಾಡುಗಳನ್ನು “ಲಘು ಸಂಗೀತ’ ಮತ್ತು ಶಾಸ್ತ್ರೀಯ ಸಂಗೀತವನ್ನು “ಸಂಗೀತ’ ಎಂದು ಕರೆಯುವುದು ನಮ್ಮಲ್ಲಿ ರೂಢಿ. ಯಾವುದನ್ನು ನಾವು ಲಘು ಸಂಗೀತ ಎನ್ನುತ್ತೇವೆಯೋ ಅದನ್ನು ಶಾಸ್ತ್ರೀಯ ಸಂಗೀತ ಕಲಾವಿದ ಕಷ್ಟದ ಸಂಗೀತ ಎನ್ನುತ್ತಾರೆ ಮತ್ತು ಲಘು ಸಂಗೀತದ ಕಲಾವಿದ ಶಾಸ್ತ್ರೀಯ ಸಂಗೀತವನ್ನು ಉಪ್ಪಿನಕಾಯಿಯ ಪ್ರಮಾಣದಲ್ಲಿ ಮಾತ್ರ ಬಳಸಲು ಬಯಸುತ್ತಾರೆ ಮತ್ತು ಪ್ರಯತ್ನಿಸುತ್ತಾರೆ ಕೂಡ. ಅದು ರುಚಿಕರವಾಗಿಯೂ ಇರುತ್ತದೆ. ಇಂಥ ಲಘು ಸಂಗೀತವನ್ನೇ ಮಾತ್ರ ಕೇಳಲು ಬಯಸುವ ಕೇಳುಗರೂ ಕೂಡ ಹಾಡಿನಲ್ಲಿ ಸಾಹಿತ್ಯಕ್ಕೆ ತಕ್ಕಂತೆ ಅಳವಡಿಸಿದ ರಾಗದ ಯಾವುದೋ ಒಂದು ತಿರುವಿನಲ್ಲಿ ತೀವ್ರವಾದ ಭಾವವೊಂದನ್ನು ಕಂಡುಕೊಳ್ಳುತ್ತಾರೆ. ಈ ಪ್ರಕಾರದಲ್ಲಿ ದಿನಗಟ್ಟಲೆ ಸಂಚಾರಿಯಾಗಿ ಮತ್ತೆ ದಿನಗಟ್ಟಲೆ ಸ್ಥಾಯಿಯಾಗಿ ನಿಂತಲ್ಲೇ ನಿಲ್ಲುವ, ಕೇಳಿದ್ದನ್ನೇ ಕೇಳುವ ಅಥವಾ ಹಾಡಿದ್ದನ್ನೇ, ಹಾಡಿದಂಥದ್ದನ್ನೇ ಹಾಡುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಇಲ್ಲಿ ಸ್ಥಾಯೀ ಮತ್ತು ಸಂಚಾರದ ಅಂಗಗಳು ತೀರಾ ಘರ್ಷಣೆಗೇನೂ ಒಳಗಾಗದಿದ್ದರೂ ಅÇÉೊಂದು ಬಗೆಯ ಹಿತವಾದ ಆಟವಿರುತ್ತದೆ. ಐ-ಪ್ಯಾಡಿನಲ್ಲಿ ಕ್ಷಣಕ್ಕೊಮ್ಮೆ ಹಾಡುಗಳನ್ನು ಶಫ‌ಲ್‌ ಮಾಡುವ ಕೇಳುಗನನ್ನೂ ನಾವು ನೋಡುತ್ತೇವೆ ಮತ್ತು ತನಗೆ ಬೇಕಾದ ಹತ್ತು ಹಾಡುಗಳನ್ನು ಮಾತ್ರ ಹಾಕಿಟ್ಟುಕೊಂಡು ದಿನವಿಡೀ ಆ ಎಲ್ಲ ಹಾಡುಗಳನ್ನೂ ಒಂದಾದ ಮೇಲೊಂದರಂತೆ ಕೇಳುವ ಕೇಳುಗರನ್ನೂ ನಾವು ಬÇÉೆವು. 

ಜಗತ್ತಿನ ಎಲ್ಲ ಭಾಗದ ಎಲ್ಲ ಬಗೆಯ ಸಂಗೀತದಲ್ಲಿಯೂ ನಾವು ಈ ಸ್ಥಾಯೀ ಮತ್ತು ಸಂಚಾರೀ ಭಾವದ ಆಟವನ್ನು ಗಮನಿಸಬಹುದು. ವರ್ಣಭೇದದ ಕಾಲದಲ್ಲಿ ನಟಾಲಿನ ಸ್ಲಮ್ಮಿನ ರಸ್ತೆಬದಿಯಲ್ಲಿ ಟಿನ್ನಿನ ಡಬ್ಬಿಗೊಂದು ಕೋಲು ಚುಚ್ಚಿ ಸಿಕ್ಕ ತಂತಿಗಳನ್ನು ಕಟ್ಟಿ ತನ್ನ ಗಿಟಾರನ್ನು ತಾನೇ ಕಟ್ಟಕೊಂಡು ಸಂಗೋಮ ಸಂಗೋಮ ಎಂದು ಹಾಡುತ್ತ ಇಂದು ಜಗತøಸಿದ್ಧ ಹಾಡುಗಾರನಾದ ಮಡಾಲಾ ಕುನೆನೆ ಎಂಬ ಕಲಾವಿದನ ಎಲ್ಲ ಹಾಡುಗಳೂ ಕೇಳುಗನ ಮನಃಸ್ಥಿತಿಯನ್ನಾಧರಿಸಿ ಹಾಡಿನ ಯಾವ ಭಾಗದಲ್ಲಿ ಬೇಕಾದರೂ ಸ್ಥಾಯಿಯಿಂದ ಸಂಚಾರಿಗೆ ಜಿಗಿಯಬಹುದು ಮತ್ತು ಸಂಚರಿಸಿ ಬಂದು ಸ್ಥಾಯಿಯಲ್ಲಿ ನಿಂತು ಮತ್ತದೇ ಸ್ಥಿತ್ಯಂತರಕ್ಕೆ ಹಾತೊರೆಯಬಹುದು. 

“”ಇದನ್ನೆಲ್ಲ ಅರ್ಥ ಮಾಡಿಕೊಳ್ಳೋದು ನನ್ನ ಕೆಲಸ ಅಲ್ಲ, ಅದು ತಾನಾಗಿಯೇ ಗೋಚರವಾಗುತ್ತದೆ ಒಂದು ದಿನ. ನನ್ನ ಪ್ರಯತ್ನ ನುಡಿಸೋದಷ್ಟೆ”- ಹಾಗಂತ ಆ ಕಲಾವಿದ ಮಿತ್ರ ಹೇಳುವಾಗ ಅಲ್ಲಿದ್ದ ಧ್ವನಿಯಲ್ಲಿ ನಿಜವಾದ ಕಲಾವಿದನೊಬ್ಬನ ಸ್ಥಾಯೀ ಮುಗ್ಧತೆಯು ಎದ್ದು ಕಾಣುತ್ತಿದ್ದದ್ದು ಸತ್ಯ. ಇದೇ ಮಾತನ್ನು ನಿಜವಾದ ಕೇಳುಗನೂ ಹೇಳುತ್ತಾನೆ. ನನ್ನ ಕೆಲಸ ಕೇಳುವುದಷ್ಟೆ. ಕೇಳುಗ ಮತ್ತು ಕಲಾವಿದರಿಬ್ಬರೂ ಭಾವನಾಜೀವಿಗಳಾಗಿರುವವರೆಗೂ ಜಗತ್ತಿನ ಎಲ್ಲ ಬಗೆಯ ಸಂಗೀತದ ಅಂತಃಕರಣವು ತನ್ಮಯತೆಯಿಂದ ಸ್ಥಾಯೀ ಮತ್ತು ಸಂಚಾರಿಯಾಗಿ ನೆಮ್ಮದಿಯಿಂದ ಬದುಕುತ್ತದೆ.

Advertisement

– ಕಣಾದ ರಾಘವ

Advertisement

Udayavani is now on Telegram. Click here to join our channel and stay updated with the latest news.

Next