Advertisement

ತಿರುಪತಿ ತಿರುಮಲ ದೇವಾಲಯದಲ್ಲಿ ಭಕ್ತರ ನೂಕುನುಗ್ಗಲು, ಹಲವರಿಗೆ ಗಾಯ: ಆಕ್ರೋಶ

01:43 PM Apr 12, 2022 | Team Udayavani |

ಹೈದರಾಬಾದ್: ಆಂಧ್ರಪ್ರದೇಶದ ಪುರಾಣ ಪ್ರಸಿದ್ಧ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರ ನೂಕುನುಗ್ಗಲಿನ ಪರಿಣಾಮ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿ, ಹಲವಾರು ಭಕ್ತರು ಗಾಯಗೊಂಡಿರುವ ಘಟನೆ ಮಂಗಳವಾರ (ಏಪ್ರಿಲ್ 12) ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಕೂಡಲೇ ಈಶ್ವರಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿ: ಡಿಕೆ ಶಿವಕುಮಾರ್ ಆಗ್ರಹ

ಪ್ರಾಥಮಿಕ ವರದಿಗಳ ಪ್ರಕಾರ, ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಟಿಕೆಟ್ ಕೌಂಟರ್ ಬಳಿ ಸರ್ವದರ್ಶನ ಟೋಕನ್ ಗಾಗಿ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸರ್ವದರ್ಶನ ಅಂದರೆ ಎಲ್ಲರಿಗೂ ಉಚಿತ ದೇವರ ದರ್ಶನ. ತಿರುಮಲ ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಉಚಿತ ಟೋಕನ್ ವಿತರಿಸುತ್ತದೆ ಎಂದು ವರದಿ ವಿವರಿಸಿದೆ.

Advertisement

ಏತನ್ಮಧ್ಯೆ ಕಳೆದ ಎರಡು ದಿನಗಳಿಂದ ಟಿಟಿಡಿ ಆಡಳಿತ ಮಂಡಳಿ ಅಧಿಕಾರಿಗಳು ಉಚಿತ ದರ್ಶನದ ಟೋಕನ್ ವಿತರಣೆಯನ್ನು ನಿಲ್ಲಿಸಿದ್ದರು. ಇದರ ಪರಿಣಾಮ ತಿರುಮಲದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಉಳಿದುಕೊಳ್ಳುವಂತಾಗಿತ್ತು.

ಮಂಗಳವಾರ (ಏಪ್ರಿಲ್ 12) ದೇವರ ದರ್ಶನಕ್ಕಾಗಿ ಕಾದು ಕೊನೆಗೆ ಭಕ್ತರು ದೇವಾಲಯದ ಒಳಗೆ ಪ್ರವೇಶಿಸಲು ಯತ್ನಿಸಿದ್ದರು. ಸಾವಿರ, ಸಾವಿರ ಸಂಖ್ಯೆಯಲ್ಲಿ ಭಕ್ತರು ಗುಂಪುಗೂಡಿದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಟಿಟಿಡಿ ತಿಳಿಸಿದೆ.

ಭಕ್ತರ ನೂಕುನುಗ್ಗಲು, ತಳ್ಳಾಟದಲ್ಲಿ ಹಲವಾರು ಭಕ್ತರು ಗಾಯಗೊಂಡಿರುವ ಘಟನೆ ನಡೆದಿದೆ. ಟಿಟಿಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲ್ತುಳಿತ ಸಂಭವಿಸಲು ಕಾರಣವಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ತಿರುಮಲ ವೆಂಕಟೇಶ್ವರ ದೇವಾಲಯಕ್ಕೆ ಭಕ್ತರು ಭೇಟಿ ನೀಡುವುದನ್ನು ನಿರ್ಬಂಧಿಸಿತ್ತು. ಮಾರ್ಚ್ 14ರಂದು ತಿರುಮಲ ದೇವಾಲಯ ಕೋವಿಡ್ ನಿರ್ಬಂಧವನ್ನು ತೆರವುಗೊಳಿಸಿತ್ತು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next