Advertisement

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

02:57 PM Mar 29, 2024 | Team Udayavani |

ಹೊಸದಿಲ್ಲಿ: ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿವೆ ಮತ್ತು ಕೋರ್ಟ್‌ಗಳನ್ನು ದೂಷಿಸುವ ಪ್ರಯತ್ನ ಮಾಡುತ್ತಿವೆ ಎಂದು ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ, ಬಾರ್‌ ಕೌನ್ಸಿಲ್‌ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಸೇರಿ 600ಕ್ಕೂ ಅಧಿಕ ವಕೀಲರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.

Advertisement

ವಿಶೇಷವಾಗಿ ರಾಜಕಾರಣಿಗಳ ಭ್ರಷ್ಟಾಚಾರ ಪ್ರಕರಣಗಳಲ್ಲಿ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ನಮ್ಮ ನ್ಯಾಯಾಂಗಕ್ಕೆ ಹಾನಿಯುಂಟು ಮಾಡುತ್ತಿವೆ, ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟು ಮಾಡುತ್ತಿವೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಮಾ.26ರಂದು ಪತ್ರ ಬರೆಯಲಾಗಿದೆ.

ಹೆಸರು ಹೇಳದೆ ಕೆಲವು ನ್ಯಾಯವಾದಿಗಳನ್ನು ಪತ್ರದಲ್ಲಿ ಟಾರ್ಗೆಟ್‌ ಮಾಡಲಾಗಿದ್ದು, ಹಗಲು ರಾಜಕಾರಣಿಗಳನ್ನು ಸಮರ್ಥಿಸಿಕೊಳ್ಳುವ ಅವರು, ರಾತ್ರಿ ವೇಳೆ ಮಾಧ್ಯಮದ ಮೂಲಕ ಜಡ್ಜ್ಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಾರೆಂದು ಆರೋಪಿಸಲಾಗಿದೆ.

ನ್ಯಾಯಾಂಗದ ವಿರುದ್ಧ ಈಗ ಬೆದರಿಕೆ ಇದೆ. ರಾಜಕೀಯ ಮತ್ತು ವೃತ್ತಿಪರ ಒತ್ತಡ ತಂತ್ರಗಳಿಂದ ನ್ಯಾಯಾಂಗವನ್ನು ರಕ್ಷಿಸುವುದು ಈಗಿನ ಅಗತ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಹಾಗಿದ್ದೂ, ತಮ್ಮ ಆರೋಪಗಳಿಗೆ ಅವರು ಯಾವುದು ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖೀಸಿಲ್ಲ.

ಬೆದರಿಸುವುದು ಕೈ ಸಂಸ್ಕೃತಿ: ಮೋದಿ

Advertisement

600 ವಕೀಲರು ಸಿಜೆಐ ಡಿ.ವೈ. ಚಂದ್ರ ಚೂಡ್‌ ಅವ ರಿಗೆ ಪತ್ರ ಬರೆದ ಬೆನ್ನಲ್ಲೇ ಅದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, “ಇತರರನ್ನು ಬೆದರಿಸುವುದು ಕಾಂಗ್ರೆ ಸ್‌ನ ಸಂಸ್ಕೃತಿಯಾಗಿದೆ. ಬದ್ಧತೆಯ ನ್ಯಾಯಾಂಗಕ್ಕೆ ಕರೆ ನೀಡಿದ್ದ ಕಾಂಗ್ರೆಸ್‌, ನಾಚಿಕೆಯಿಲ್ಲದೇ ತಮ್ಮ ಸ್ವಹಿತಾಸಕ್ತಿಗಳಿಗಾಗಿ ಇತರರಿಂದ ಬದ್ಧತೆ ಬಯಸುತ್ತಿದೆ. ಆದರೆ ರಾಷ್ಟ್ರದೆಡೆಗೆ ಅವರು ಯಾವುದೇ ಬದ್ಧತೆಯನ್ನು ತೋರುವುದಿಲ್ಲ’ ಎಂದು ಹೇಳಿದ್ದಾರೆ.

4 ಜಡ್ಜ್ ಪತ್ರಿಕಾಗೋಷ್ಠಿ ಮಾಡಿದ್ದು ಯಾವಾಗ?: ಮೋದಿಗೆ ಖರ್ಗೆ ಪ್ರಶ್ನೆ

ಮೋದಿಗೆ ತಿರುಗೇಟು ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “”ಸುಪ್ರೀಂ ಕೋರ್ಟ್‌ನ 4 ಹಿರಿಯ ಜಡ್ಜ್ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ, ಪ್ರಜಾಪ್ರಭುತ್ವ ನಾಶವಾಗುತ್ತಿದೆ ಎಂದು ಎಚ್ಚರಿಸಿದ್ದು ನಿಮ್ಮ ಅವಧಿಯಲ್ಲೇ ಎಂಬುದನ್ನು ನಾಜೂಕಾಗಿ ಮರೆತಿದ್ದೀರಿ. ಆ ಪೈಕಿ ಒಬ್ಬ ನ್ಯಾಯಮೂರ್ತಿಯನ್ನು ರಾಜ್ಯಸಭೆಗೆ ನೇಮಕ ಮಾಡಿದಿರಿ. ಪಶ್ಚಿಮ ಬಂಗಾಲದಲ್ಲಿ ಮಾಜಿ ನ್ಯಾಯಮೂರ್ತಿಯನ್ನು ಕಣಕ್ಕಿಳಿಸುತ್ತಿರುವುದನ್ನು ನೀವು ಮರೆತಿದ್ದೀರಾ? ಅವರಿಗೇಕೆ ಟಿಕೆಟ್‌ ನೀಡಿದಿರಿ? ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸುಪ್ರೀಂ ಕೋರ್ಟ್‌ ಯಾಕೆ ರದ್ದು ಮಾಡಿತು” ಎಂದು ಖರ್ಗೆ ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next