ಗುಳೇದಗುಡ್ಡ: ಇಲ್ಲಿಯ ಪುರಸಭೆಯಲ್ಲಿ ಲೆಕ್ಕ ಶಾಖೆಗೆ ಸಿಬ್ಬಂದಿ ಇಲ್ಲದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಪುರಸಭೆ ಸಿಬ್ಬಂದಿ ವೇತನ ಸೇರಿದಂತೆ ಎಲ್ಲ ಹಣಕಾಸಿನ ವ್ಯವಹಾರಗಳು ಸ್ಥಗಿತಗೊಂಡಿದ್ದು, ಪುರಸಭೆ ಸಿಬ್ಬಂದಿ ಪರದಾಡುವಂತಾಗಿದೆ.
ಪುರಸಭೆಯ ಗುತ್ತಿಗೆ ಆಧಾರದ ಮೇಲೆ 59 ಜನ, 27 ಕಾಯಂ ನೌಕರರು ಮೂರು ತಿಂಗಳಿನಿಂದ ವೇತನವಿಲ್ಲದ ವಿಷಯ ಆಡಳಿತಾಧಿಕಾರಿಗಳು ಆಗಿರುವ ಉಪವಿಭಾಗಾಧಿ ಕಾರಿಗಳ ಗಮನಕ್ಕೂ ಬಂದಿಲ್ಲ. ಅಷ್ಟೇ ಅಲ್ಲದೇ ಸಿಬ್ಬಂದಿ ವೇತನದ ಜೊತೆಗೆ ಗುತ್ತಿಗೆದಾರರ ಬಿಲ್ ಹಾಗೂ ಇನ್ನಿತರೆ ಚೆಕ್ ಗಳೂ ಸಹ ಪಾಸಾಗದೇ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ನಿತ್ಯ ಪುರಸಭೆಗೆ ಅಲೆಯುವಂತಾಗಿದೆ.
ಏಕೆ ವಿಳಂಬ?: ಪಟ್ಟಣದ ಪುರಸಭೆಯಲ್ಲಿ ಈ ಹಿಂದೆ ಲೆಕ್ಕಶಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಅಮಾನತು ಆಗಿದ್ದರಿಂದ ಸಿಬ್ಬಂದಿ ವೇತನ ಬಟಾವಡೆಯಾಗಿಲ್ಲ. ಆ ಸಿಬ್ಬಂದಿ ಅಮಾನತುಗೊಂಡ ನಂತರ ಬೇರೊಬ್ಬರನ್ನು ನಿಯೋಜಿಸಿಲ್ಲ. ನಿಯೋಜಿಸಿದರೂ ಬಾರದ ಸಿಬ್ಬಂದಿ: ಕಳೆದ ತಿಂಗಳು ಬಾಗಲಕೋಟೆ ಜಿಲ್ಲಾಡಳಿತ ಸಿಬ್ಬಂದಿ ನಿಯೋಜಿಸಿ ಆದೇಶಿಸಿದರೆ ಆ ಸಿಬ್ಬಂದಿ ಬಂದಿಲ್ಲ. ನಂತರ ಬೇರೋಬ್ಬರನ್ನು ನಿಯೋಜಿಸಿದರೂ ಅವರೂ ಬೇರೆ ಕಾರಣಗಳ ನೆಪ ಹೇಳಿ ಹಾಜರಾಗಿಲ್ಲ. ಬೇರೆ ಸಿಬ್ಬಂದಿಯ ಕೇಳುವ ಬದಲು ಪುರಸಭೆ ತಮ್ಮ ಸಿಬ್ಬಂದಿಯವರನ್ನೇ ಈ ಕಾರ್ಯಕ್ಕೆ ನಿಯುಕ್ತಿ ಮಾಡಿದ್ದರೇ ಸರಿ ಹೋಗುತ್ತಿತ್ತು. ಆದರೆ ಆ ವ್ಯವಸ್ಥೆ ಮಾಡದಿರುವುದಕ್ಕೆ ಪುರಸಭೆಗೆ ಸಿಬ್ಬಂದಿಗಳ ವೇತನ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಬುಧವಾರ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಎಚ್.ಜಯಾ ಪುರಸಭೆಗೆ ಭೇಟಿ ನೀಡಿದಾಗ ಈ ವಿಷಯ ಗಮನಕ್ಕೆ ಬಂದಿದೆ. ಮುಖ್ಯಾಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಶುಕ್ರವಾರವೇ ಸಿಬ್ಬಂದಿ ವೇತನ ಹಾಗೂ ಇತರೇ ಬಿಲ್‌ಗಳ ಚೆಕ್ ಪಾಸಾಗಬೇಕು ಎಂದು ಸೂಚಿಸಿದ್ದಾರೆ.
ಗುಳೇದಗುಡ್ಡ ಪುರಸಭೆಯಲ್ಲಿ ಲೆಕ್ಕ ಶಾಖೆಗೆ ಸಿಬ್ಬಂದಿ ಇಲ್ಲದಿರುವ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಪುರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಮನಕ್ಕೆ ಬಂದಿದ್ದು, ಎರಡು ದಿನಗಳಲ್ಲಿ ಸರಿಪಡಿಸುವೆ.
ಎಚ್.ಜಯಾ, ಉಪವಿಭಾಗಾಧಿಕಾರಿ
-ಆಡಳಿತಾಧಿಕಾರಿ, ಪುರಸಭೆ ಗುಳೇದಗುಡ್ಡ
ಜಿಲ್ಲಾಡಳಿತ ಸಿಬ್ಬಂದಿಯನ್ನು ಕಳೆದ ತಿಂಗಳು ನಿಯೋಜಿಸಿ ಆದೇಶಿಸಿದೆ. ಸಿಬ್ಬಂದಿ ಹಾಜರಾಗಿಲ್ಲ.ನಂತರ ಬೇರೋಬ್ಬರನ್ನು ನಿಯೋಜಿಸಿದರೂ ಅವರೂ ಬಂದಿಲ್ಲ.
. ಏಸು ಬೆಂಗಳೂರು,
ಮುಖ್ಯಾಧಿಕಾರಿ, ಪುರಸಭೆ ಗುಳೇದಗುಡ್ಡ