ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಚರ್ಚ್ ಜಾತ್ರೆ ವಿಶ್ವವಿಖ್ಯಾತಿ. ಎಲ್ಲೆಡೆಯಿಂದ ಸರ್ವಧರ್ಮಿಯರು ಇಲ್ಲಿಗೆ ಆಗಮಿಸುತ್ತಾರೆ. ಜಾತ್ರೆ ನಡೆಯುವ ಅಷ್ಟೂ ದಿನವೂ ಸಂಭ್ರಮವೋ ಸಂಭ್ರಮ. ವಾರ್ಷಿಕೋತ್ಸವ ದಿನಗಳಲ್ಲಿ ಹಗಲು ರಾತ್ರಿ ಎನ್ನದೆ ಜನಸಾಗರವೇ ಇಲ್ಲಿಗೆ ಹರಿದು ಬರುತ್ತದೆ.
ಇಂದಿನಿಂದ (ಜ.22) ಮುಂದಿನ 5 ದಿನಗಳ ಕಾಲ ಅತ್ತೂರು ವಿಜೃಂಭಣೆಗೆ ತೆರೆದುಕೊಳ್ಳುತ್ತಿದೆ. ಭಕ್ತರ ಆಗಮನ ಜತೆಗೆ ಸಂತೆ ವ್ಯಾಪಾರವೂ ಇಲ್ಲಿ ಜೋರಾಗಿಯೇ ನಡೆಯುತ್ತದೆ. ವ್ಯಾಪಾರ ಮಳಿಗೆಗಳು ತೆರೆದುಕೊಂಡು ವ್ಯಾಪಾರ ವಹಿವಾಟು ಆರಂಬಿಸಿದೆ.
ಕಾರ್ಕಳದ ಸಂತ ಮಾರಿ ಎಂದೆ ಪ್ರಸಿದ್ಧಿ ಹೊಂದಿರುವ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಜಾತ್ರೆ ಆರಂಭದ ಹಿಂದಿನ ದಿನವೇ ವಿಜೃಂಭಣೆಯಿಂದಲೆ ಪ್ರಾರಂಭಗೊಂಡಿದೆ. ಅತ್ತೂರು ಜಾತ್ರೆ ಎಂದ ಕೂಡಲೆ ಎಲ್ಲರ ಮನಸ್ಸಿನಲ್ಲಿ ಮೂಡುವ ಯೋಚನೆ ಈ ವರ್ಷ ಎಷ್ಟು ಸಂತೆ ಬಂದಿರಬಹುದು ಎಂಬುದಾಗಿದ್ದು, ತೊಟ್ಟಿಲಿನಿಂದ ಹಿಡಿದು ಆಟದ ಜೋಕಾಲಿ, ಮನೋರಂಜನೆಗಳು. ಜಾಯಿಂಟ್‌ವಿಲ್, ಮಕ್ಕಳು ಕುಳಿತು ತಿರುಗುವ ವಿವಿಧ ಆಟಿಕೆಗಳು, ಡ್ರೆಸ್ ಮೆಟಿರಿಯಲ್, ಮಣಿಸರಕಿನ ಸ್ಟಾಲ್‌ಗಳು, ಐಸ್‌ಕ್ರಿಂ, ಪಾನಿಪುರಿ, ಗೋಬಿ ಮಂಚೂರಿ ಅತ್ತೂರಿನ ಜಾತ್ರೆಯ ವಿಶೇಷ ಕಲ್ಲಂಗಡಿ ಸಹಿತ ವಿವಿಧ ತಿನಿಸುಗಳ ಸ್ಟಾಲ್‌ಗಳು ಈ ಬಾರಿ ಸಾಕಷ್ಟು ಇವೆ.
ವ್ಯಾಪಾರ ಮಾಡುವುದಕ್ಕೆ ಸಂತೆ ಮಾರುಕಟ್ಟೆಯಲ್ಲಿ 480 ಮಳಿಗೆಗಳು ಸೇರಿ ಸಣ್ಣ ಪುಟ್ಟ ಮಾರಾಟ ಸೇರಿ 500ಕ್ಕೂ ಅಧಿಕ ಅಂಗಡಿಗಳು ತೆರೆದುಕೊಂಡಿವೆ. ಚರ್ಚ್ ಮುಂಭಾಗದ ರಸ್ತೆ ಬದಿ, ಎಡಬದಿಗೆ, ವಿಶಾಲವಾದ ಸಂತೆ ಮಾರುಕಟ್ಟೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆರಂಭದ ದಿನದಿಂದಲೆ ಜನರು ಚರ್ಚ್ ಕಡೆ ಆಗಮಿಸುತಿದ್ದು, ಮಳೆಗೆಗಳ ಮುಂದೆಲ್ಲ ಜನ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದಾರೆ.
ಮುಂದಿನ ನಾಲ್ಕೈದು ದಿನಗಳಲ್ಲಿ ಇನ್ನು ಹೆಚ್ಚುವ ಸಾಧ್ಯತೆಗಳಿವೆ. 2 ವರ್ಷಗಳ ಹಿಂದೆ ಕೊರೊನಾದ ಕಾರಣಕ್ಕೆ ಜಾತ್ರೆ ನಡೆದಿರಲಿಲ್ಲ. ಕಳೆದ ವರ್ಷಗಳಿಂದ ಮರಳಿ ಹಿಂದಿನ ಸ್ಥಿತಿಗೆ ಅತ್ತೂರು ಜಾತ್ರೆ ಮರಳಿದೆ.
ದಕ್ಷಿಣ ಭಾರತದಲ್ಲೆ ಭಾವೈಕ್ಯದ ಅಗ್ರ ಧಾರ್ಮಿಕ ಕ್ಷೇತ್ರವಾದ ಸಂತ ಲಾರೆನ್ಸ್ ಚರ್ಚ್ ಝಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಉತ್ಸವದಲ್ಲಿ ಸಹಸ್ರಾರು ಮಂದಿ ಭಕ್ತರು ಸಂತ ಲಾರೆನ್ಸ್ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿಗೆ ಆಗಮಿಸಿ ಪ್ರಾರ್ಥಿಸುತ್ತಿದ್ದಾರೆ.