ಬಾಗಲಕೋಟೆ: ಜಿಲ್ಲಾದ್ಯಂತ ಜೂ.25ರಿಂದ ಜರುಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣ ಡಿ-ಸ್ಯಾನಿಟೈಜೇಶನ್ ಮಾಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ನೂತನಸಭಾ ಭವನದಲ್ಲಿ ಗುರುವಾರ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ಮಕ್ಕಳ ಸುರಕ್ಷತೆ ದೃಷ್ಟಿಯಿಂದಜಿಲ್ಲೆಯಲ್ಲಿ ಸ್ಥಾಪಿಸಲಾದ ಒಟ್ಟು 123 ಪರೀಕ್ಷಾ ಕೇಂದ್ರಗಳ ಎಲ್ಲ ಕೊಠಡಿಗಳನ್ನು ಡಿ-ಸ್ಯಾನಿಟೈಜೇಶನ್ ಮಾಡಲು ಕ್ರಮ ವಹಿಸಬೇಕು. ಪ್ರತಿಯೊಂದು ಪರೀಕ್ಷಾರ್ಥಿಗಳಿಗೆ ಎರಡೆರಡು ಮಾಸ್ಕ್ ನೀಡಬೇಕು. ದಿನಕ್ಕೆ 5 ಮಿಲಿಯಂತೆ ಎಲ್ಲ 6 ವಿಷಯಗಳ ಪರೀಕ್ಷೆಗಳಿಗೆ 30 ಮಿಲಿಯಂತೆ ಒಟ್ಟು 950 ಲೀಟರ್ ಸ್ಯಾನಿಟೈಸರ್ ನ್ನು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಪ್ರತಿಯೊಂದು ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆಗೆ ಒಳಪಡಿಸಬೇಕು. ಪ್ರತಿ 200 ಮಕ್ಕಳಿಗೆ ಒಂದರಂತೆ ಥರ್ಮಲ್ ಸ್ಕ್ರೀನಿಂಗ್ ಹಾಗೂ 492 ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಮಾರ್ಗ ನಕ್ಷೆಗಳಂತೆ ಬಸ್‌ಗಳನ್ನು ವ್ಯವಸ್ಥೆ ಮಾಡಿ ಎಲ್ಲ ಮಕ್ಕಳು ತಮ್ಮ ವಾಸಸ್ಥಳ, ಶಾಲೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ಸುಗಮವಾಗಿ ತಲುಪಿಸುವಂತೆ ನೋಡಿಕೊಳ್ಳಬೇಕು. ಕಂಟೇನ್ಮೆಂಟ್ ವಲಯದಲ್ಲಿರುವ ಮಕ್ಕಳು ಪರೀಕ್ಷೆ ಸಮಯದಲ್ಲಿ ಆರೋಗ್ಯ ಇಲಾಖೆ ನೀಡುವ ಎನ್-95 ಮಾಸ್ಕ್ ಧರಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಬರೆಯಲು ವ್ಯವಸ್ಥೆ ಮಾಡಲು ತಿಳಿಸಿದರು.
ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶಿಸುವಾಗ, ಮರಳಿ ಹೋಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ಗಳನ್ನು ಅಳವಡಿಸಬೇಕು. ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಪರೀಕ್ಷಾ ಕೇಂದ್ರಗಳಿಂದ ಜಿಲ್ಲಾ ಸ್ಟ್ರಾಂಗ್ ರೂಂಗಳಿಗೆ ಪಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳ ಸಾಗಾಣಿಕೆಗೆ ಸೂಕ್ತ ಭದ್ರತೆ ಒದಗಿಸಲಾಗುತ್ತದೆ. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ 144 ಸಿಆರ್ ಪಿಸಿ ಕಲಂ ಜಾರಿ ಮಾಡಲಾಗುವುದು. ಝರಾಕ್ಸ್ ಅಂಗಡಿ ಮುಚ್ಚಿಸಲು ಆದೇಶಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಬಿರಾದಾರ ಮಾತನಾಡಿ, ಜಿಲ್ಲೆಯಲ್ಲಿ 97 ರೆಗ್ಯೂಲರ್, 2 ಖಾಸಗಿ, 24 ಬ್ಲಾಕ್ ಕೇಂದ್ರಗಳು ಸೇರಿ ಒಟ್ಟು 123 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. 27,436 ರೆಗ್ಯೂಲರ್ ಅಭ್ಯರ್ಥಿಗಳು, 2,627 ಪುನರಾವರ್ತಿತ, 526 ಖಾಸಗಿ, 237 ಪುನರಾವರ್ತಿತ ಖಾಸಗಿ, 676 ಬೇರೆ ಜಿಲ್ಲೆಗಳಿಂದ ಈ ಜಿಲ್ಲೆಗೆ ಬಂದ ಅಭ್ಯರ್ಥಿಗಳು ಸೇರಿ ಒಟ್ಟು 31,502 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಇತರರು ಇದ್ದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿ ಕೊಠಡಿಯಲ್ಲಿ ಗರಿಷ್ಠ 18 ಮಕ್ಕಳನ್ನು ಕೂಡಿಸಬೇಕು. ಕುಡಿಯುವ ನೀರನ್ನು ಮಕ್ಕಳೇ ತರಬೇಕು. ಪೆನ್ನು, ಕಂಪಾಸ್ ಪೆಟ್ಟಿಗೆಯಂತಹ ಇತರೆ ಸಾಮಗ್ರಿ ಬೇರೆಯವರಿಂದ ಪಡೆಯುವಂತಿಲ್ಲ. –
ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ಜಿಲ್ಲಾಧಿಕಾರಿ