“ನಾನು ಓದಿರೋದು ಎಸ್ಸೆಸ್ಸೆಲ್ಸಿ. ಆದರೆ, ತೆರೆ ಮೇಲೆ ನಾನೊಬ್ಬ ಐಎಎಸ್ ಅಧಿಕಾರಿ…’ ಹೀಗೆ ಹೇಳಿದ್ದು ಬೇರಾರೂ ಅಲ್ಲ, ನಟ ನೀನಾಸಂ ಸತೀಶ್. ಅಷ್ಟಕ್ಕೂ ಸತೀಶ್ ಹೀಗೆ ಹೇಳಿಕೊಳ್ಳಲು ಕಾರಣ, “ಚಂಬಲ್’ ಚಿತ್ರ. ಹೌದು, ಈ ಚಿತ್ರದಲ್ಲಿ ಸತೀಶ್ ಜಿಲ್ಲಾಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಅಷ್ಟಕ್ಕೂ ಅವರು ಕಡಿಮೆ ಓದಿದ ಬಗ್ಗೆ ಮಾತೇಕೆ ಬಂತು ಎಂಬ ಪ್ರಶ್ನೆಗೆ, ಅವರು “ಚಂಬಲ್’ ಟ್ರೇಲರ್ ನೋಡಿದಾಗ, “ಸಿನಿಮಾದಲ್ಲಿ ಡಿಸಿ ಪಾತ್ರಕ್ಕೆ ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದಕ್ಕೂ ಸಾರ್ಥಕ’ ಅನಿಸಿತಂತೆ.
ಆ ಬಗ್ಗೆ ಹೇಳುತ್ತಲೇ, “ಅಣ್ಣಾವ್ರು ಒಂದು ಕಡೆ ಮಾತನಾಡುತ್ತ ಹೇಳಿಕೊಂಡಿದ್ದರು. ನಾನು ಓದಿದ್ದು ಮೂರನೇ ಕ್ಲಾಸು. ಆದರೆ, ನನ್ನನ್ನು ಜೇಮ್ಸ್ ಬಾಂಡ್ ಆಗಿ, ಪೊಲೀಸ್ ಅಧಿಕಾರಿಯಾಗಿ, ಲೆಕ್ಚರರ್ ಆಗಿ ತೋರಿಸಿದ್ದಾರೆ’ ಅಂದಿದ್ದರು. ನನಗೆ ಅವರ ಮಾತುಗಳು ಈ ಚಿತ್ರದ ಪಾತ್ರ ಮಾಡಿದಾಗ ನೆನಪಾಗುತ್ತವೆ. ಯಾಕೆಂದರೆ, ನಾನು ಓದಿರೋದು ಎಸ್ಸೆಸ್ಸೆಲ್ಸಿ. ಆದರೆ, ಈ ಚಿತ್ರದಲ್ಲಿ ನಾನು ಐಎಎಸ್ ಅಧಿಕಾರಿಯಾಗಿ ನಟಿಸಿದ್ದೇನೆ.
ನಿಜ ಹೇಳುವುದಾದರೆ, ನಿಜ ಬದುಕಲ್ಲಿ ನಾನು ಓದಿರುವುದಕ್ಕೆ ಸರ್ಕಾರಿ ಕಂಡಕ್ಟರ್ ಕೆಲಸವೂ ಸಿಗುವುದಿಲ್ಲ. ರೀಲ್ ಲೈಫ್ನಲ್ಲಿ ಜಿಲ್ಲಾಧಿಕಾರಿಯಾಗಿದ್ದೇನೆ. ಈ ಚಿತ್ರದಲ್ಲಿ ಡಿಸಿ ಪಾತ್ರ ಮಾಡುವಾಗ, ಅವರು ಎಷ್ಟೊಂದು ಓದಿರುತ್ತಾರೆ, ಏನೆಲ್ಲಾ ವಿಷಯ ತಿಳಿದುಕೊಂಡಿರುತ್ತಾರೆ, ಅವರ ಪವರ್ ಎಷ್ಟೆಲ್ಲಾ ಇರುತ್ತೆ ಅನ್ನೋದು ಗೊತ್ತಾಯ್ತು. ಮಿನಿಸ್ಟರ್ ಬಿಟ್ಟರೆ, ಐಎಎಸ್ ಅಧಿಕಾರಿಗಳಿಗೆ ಏನೇ ಆದೇಶ, ಸೂಚನೆ ನೀಡುವುದಕ್ಕೆ ಪವರ್ ಇರುತ್ತೆ.
ನಾನು ಚಿತ್ರದಲ್ಲಿ ಸುಭಾಶ್ ಎಂಬ ಪಾತ್ರ ಮಾಡಿದ್ದೇನೆ. ಹಾಗೆ ನೋಡಿದರೆ, “ಚಂಬಲ್’ ಶೀರ್ಷಿಕೆಗೂ ಮುನ್ನ, “ಸುಭಾಶ್’ ಎಂಬ ಶೀರ್ಷಿಕೆ ಇಡಬೇಕಾಗಿತ್ತು. ಆದರೆ, ಅದು ಸಿಗದ ಕಾರಣ, “ಚಂಬಲ್’ ಎಂದು ಇಡಲಾಗಿದೆ’ ಎಂದು ಹೇಳಿಕೊಳ್ಳುತ್ತಾರೆ ಸತೀಶ್. ಹಾಗಾದರೆ, ಇದು ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಕುರಿತಾದ ಕಥೆ ಹೊಂದಿದೆಯಾ? ಈ ಪ್ರಶ್ನೆಗೆ, ಅಂಥದ್ದೇನೂ ಇಲ್ಲ. ಎನ್ನುವ ಸತೀಶ್, “ಅವರ ಕಥೆಯಲ್ಲ.
ಈ ಚಿತ್ರ ನೋಡಿದವರಿಗೆ ಇದು ಯಾವ ರೀತಿಯ ಚಿತ್ರ ಅನ್ನೋದು ಗೊತ್ತಾಗುತ್ತೆ. ಯಾರಿಗೆಲ್ಲಾ ಗೌರವ ಸಲ್ಲಬೇಕೋ ಅದು ಸಲ್ಲುತ್ತದೆ. ಎಲ್ಲರೂ ಇದನ್ನು ಒಂದು ಸಿನಿಮಾವಾಗಿ ನೋಡಿ. ಆದರೆ, ಇದನ್ನು ವ್ಯಕ್ತಿ ಕುರಿತ ಚಿತ್ರಣ ಅಂತ ದಯವಿಟ್ಟು ಬಿಂಬಿಸಬೇಡಿ’ ಎಂಬ ಮನವಿ ಇಡುತ್ತಾರೆ ಸತೀಶ್. “ಚಂಬಲ್’ ಫೆಬ್ರವರಿ 22 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರವನ್ನು ಗೋಕುಲ್ ಫಿಲ್ಮ್ಸ್ ವಿತರಣೆ ಮಾಡುತ್ತಿದೆ. ಗೋಕುಲ್‌ರಾಜ್ ಸಹೋದರರು ಈ ಚಿತ್ರ ವೀಕ್ಷಿಸಿ, ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರಂತೆ. “ಚಂಬಲ್’ ಚಿತ್ರ ವಿತರಣೆಗೆ ಮುಂದಾಗಲು ಕಾರಣ, ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳ ಕ್ಲೈಮ್ಯಾಕ್ಸ್ ಎಂಬುದು ಅವರ ಮಾತು.