ವಿದ್ಯಾರ್ಥಿನಿಯೊಬ್ಬರು ಈ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಹೇಗೆ ತಯಾರಾಗಲಿ ಎಂದು ಅಳಲು ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಎಸೆಸೆಲ್ಸಿ ಪರೀಕ್ಷಾ ದಿನಾಂಕವನ್ನು ಶಿಕ್ಷಣ ಸಚಿವರು ಘೋಷಿಸಿದ ಬೆನ್ನಲ್ಲೇ ವಿದ್ಯಾರ್ಥಿನಿ ವಾಸ್ತವ್ಯವಿರುವ ಮನೆ ಕುಸಿದು ಬಿದ್ದಿದ್ದು ಪರೀಕ್ಷೆಗೆ ಸಿದ್ಧತೆ ಮಾಡುವುದಕ್ಕಿಂತ ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬನ್ನೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕಮುಟ್ನೂರು ಗ್ರಾಮದ ಗೋಪಾಲ ಶೆಟ್ಟಿ ಅವರ ಪುತ್ರಿ, ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ದೀಕ್ಷಾ ಶೆಟ್ಟಿ ಈ ರೀತಿ ಸಂಕಷ್ಟಕ್ಕೆ ಸಿಲುಕಿರುವ ಬಾಲಕಿ. ಮಳೆಯ ಪರಿಣಾಮ ಮನೆ ಶಿಥಿಲಗೊಂಡಿದ್ದು ಒಂದು ಭಾಗ ಜೂ. 28ರಂದು ಬಿದ್ದಿದೆ. ಜತೆಗೆ ಛಾವಣಿಯೂ ಕುಸಿಯುವ ಭೀತಿ ಇದೆ. ತಾತ್ಕಾಲಿಕ ದುರಸ್ತಿ ಮಾಡಲೂ ಮನೆಯವರಿಗೆ ಶಕ್ತಿ ಇಲ್ಲ. ಟಾರ್ಪಾಲು ಹೊದೆಸಲು ಕೂಡ ಸಾಧ್ಯವಾಗಿಲ್ಲ. ಹೀಗಾಗಿ ಮನೆಯವರನ್ನು ತಾತ್ಕಾಲಿಕವಾಗಿ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
Related Articles
ದೀಕ್ಷಾಳ ತಂದೆ ಗೋಪಾಲ ಶೆಟ್ಟಿ ಕಾಲು ನೋವಿನಿಂದ ಬಳಲುತ್ತಿದ್ದು, ದುಡಿಮೆ ಸಾಧ್ಯವಾಗುತ್ತಿಲ್ಲ. ಪತ್ನಿ ಬೀಡಿ ಕಟ್ಟಿ, ಕೂಲಿ ಕೆಲಸ ಮಾಡಿ ಪತಿ ಮತ್ತು ಮಕ್ಕಳಿಬ್ಬರ ಪಾಲನೆ ಮಾಡುತ್ತಿದ್ದಾರೆ. ದೀಕ್ಷಾಳ ಸಹೋದರ ವಿದ್ಯಾರ್ಥಿ. ಇಂತಹ ಪರಿಸ್ಥಿತಿಯಲ್ಲಿ ಮನೆ ಕುಸಿದಿರುವುದು ಬಾಲಕಿಯ ಭವಿಷ್ಯದ ಮೇಲೆಯೇ ಪರಿಣಾಮ ಬೀರುವಂತಾಗಿದೆ.
Advertisement
ಸೋಮವಾರ ಮಳೆಯಿಂದ ಮನೆಯ ಒಂದು ಭಾಗ ಕುಸಿದಿದೆ. ಛಾವಣಿಯೂ ಬೀಳುವ ಹಂತದಲ್ಲಿದೆ. ಆರ್ಥಿಕವಾಗಿ ಅನಾನುಕೂಲತೆ ಇದೆ. ಎಸೆಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು ಮನೆಯೇ ಇಲ್ಲದೆ ನಾನು ಓದುವುದಾದರೂ ಹೇಗೆ?– ದೀಕ್ಷಾ ಶೆಟ್ಟಿ, ಎಸೆಸೆಲ್ಸಿ ವಿದ್ಯಾರ್ಥಿನಿ