Advertisement

ಆಗಸ್ಟ್‌ ಮೊದಲ ವಾರವೇ ಫ‌ಲಿತಾಂಶ : SSLC ಮೌಲ್ಯಮಾಪನ ಶೇ. 89 ಪೂರ್ಣ

02:11 AM Jul 20, 2020 | Hari Prasad |

ಬೆಂಗಳೂರು: ಕೋವಿಡ್ 19 ಆತಂಕ ನಡುವೆಯೇ ಎಸೆಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಶೇ. 89ರಷ್ಟು ಮುಗಿದಿದ್ದು, ಫ‌ಲಿತಾಂಶ ಪ್ರಕಟನೆಗೆ ಸಿದ್ಧತೆ ಆರಂಭವಾಗಿದೆ.

Advertisement

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದಾಗಿ ಮೌಲ್ಯಮಾಪನ ಪ್ರಕ್ರಿಯೆ ಆರಂಭ ವಿಳಂಬವಾಗಿದ್ದರೂ ಎರಡು ಮೂರು ದಿನಗಳಲ್ಲಿ ಮುಗಿಯಲಿದೆ.

ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಆಗಸ್ಟ್‌ ಮೊದಲ ವಾರದೊಳಗೆ ಫ‌ಲಿತಾಂಶ ನೀಡಲು ಸಿದ್ಧತೆ ನಡೆಸುತ್ತಿದೆ.

ಸರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ವಿವಿಧ ಇಲಾಖೆಗಳ ಸಹಕಾರದೊಂದಿಗೆ 2019-20ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು ಜೂನ್‌ 25ರಿಂದ ಜುಲೈ 3ರ ವರೆಗೆ ನಡೆಸಿತ್ತು.
ಜುಲೈ 13ರಿಂದ ಮೌಲ್ಯಮಾಪನ ಪ್ರಕ್ರಿಯೆಗೆ ರಾಜ್ಯಾದ್ಯಂತ ಚಾಲನೆ ದೊರೆತಿದ್ದು, ಈಗಾಗಲೇ ಶೇ.89ರಷ್ಟು ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮೂಲಗಳು ‘ಉದಯವಾಣಿ’ಗೆ ಖಚಿತಪಡಿಸಿವೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಮೌಲ್ಯಮಾಪನ ಎರಡು ದಿನ ವಿಳಂಬವಾಗಿ ನಡೆದಿತ್ತು. ಮೈಸೂರು, ಧಾರವಾಡ ಹಾಗೂ ಕಲಬುರಗಿ ವಿಭಾಗದ ಬಹುತೇಕ ಜಿಲ್ಲೆಗಳ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದೆ. ಉಳಿದಿರುವ ಶೇ.11ರಷ್ಟು ಮೌಲ್ಯಮಾಪನ ಜುಲೈ 22 ಅಥವಾ 23ರೊಳಗೆ ಪೂರ್ಣಗೊಳ್ಳಲಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಇಷ್ಟು ವೇಗ ಹೇಗೆ ಸಾಧ್ಯ?
ಕೋವಿಡ್ 19 ಪರಿಸ್ಥಿತಿಯಲ್ಲಿ ಮೌಲ್ಯಮಾಪನ ಸಲೀಸಾಗಿ ನಡೆಸುವುದು ಕಷ್ಟಸಾಧ್ಯ ಎಂದು ಬಹುತೇಕರು ಭಾವಿಸಿದ್ದರು. ಆದರೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು, ಸರಕಾರದ ನಿರ್ದೇಶನದಂತೆ ಮೌಲ್ಯಮಾಪನ ಕೇಂದ್ರದ ಭದ್ರತೆ ಹಾಗೂ ಮೌಲ್ಯಮಾಪಕರ ಸುರಕ್ಷೆಗೆ ಪ್ರತ್ಯೇಕ ಮಾರ್ಗಸೂಚಿ ರಚಿಸಿ, ಅನುಷ್ಠಾನ ಮಾಡಿದೆ. ಆಯಾ ಜಿಲ್ಲೆಗಳಲ್ಲಿರುವ ಶಿಕ್ಷಕರು ಜಿಲ್ಲೆಯ ಒಳಗೆ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಲು ಅನುಕೂಲ ಆಗುವಂತೆ 51 ಹೆಚ್ಚುವರಿ ಮೌಲ್ಯಮಾಪನ ಕೇಂದ್ರ ತೆರೆದಿತ್ತು.

ಮೌಲ್ಯಮಾಪಕರಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿದೆ. ಅಂಕಗಳ ಆನ್‌ಲೈನ್‌ ನಮೂದನೆಗೆ ಸರ್ವರ್‌ ಸಮಸ್ಯೆ ಆಗದಂತೆಯೂ ನೋಡಿಕೊಂಡಿದ್ದೇವೆ. ಸುಮಾರು 71 ಸಾವಿರ ಮೌಲ್ಯಮಾಪಕರಲ್ಲಿ ಸರಾಸರಿ 68 ಸಾವಿರ ಮೌಲ್ಯಮಾಪಕರು ಈ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಮಂಡಳಿಯ ನಿರ್ದೇಶಕಿ ವಿ. ಸುಮಂಗಳಾ ಅವರು ಪತ್ರಿಕೆಗೆ ವಿವರಿಸಿದರು.

ಮೌಲ್ಯಮಾಪನ ಬಹುತೇಕ ಪೂರ್ಣ
ಎಸೆಸೆಲ್ಸಿ ಮೌಲ್ಯಮಾಪನ ಬಹುತೇಕ ಪೂರ್ಣಗೊಂಡಿದೆ. ಬೆಂಗಳೂರಿನ ಎರಡು ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದಾಗಿ ಸ್ವಲ್ಪ ತಡವಾಗಿ ಮೌಲ್ಯಮಾಪನ ಆರಂಭವಾಗಿದೆ. ಉಳಿದಂತೆ ಎಲ್ಲ ಜಿಲ್ಲೆಗಳ ಮಾಹಿತಿಯನ್ನು ಪಡೆಯುತ್ತಿದ್ದೇನೆ. ಆಗಸ್ಟ್‌ ಮೊದಲ ವಾರದಲ್ಲೇ ಫ‌ಲಿತಾಂಶ ನೀಡಲಿದ್ದೇವೆ.
– ಸುರೇಶ್‌ ಕುಮಾರ್‌, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next