ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷವೂ ಪರೀಕ್ಷೆಗೆ ನೋಂದಣಿಯಾದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಬಹುದು ಎಂಬ ಮುಂದಾಲೋಚನೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಣಿಯಾಗಿದ್ದರು. ಈ ವರ್ಷ ಪರೀಕ್ಷೆ ನಡೆಸಿದ್ದರಿಂದ ದಾಖಲೆ ಪ್ರಮಾಣದಲ್ಲಿ ಖಾಸಗಿ ವಿದ್ಯಾರ್ಥಿಗಳು ಗೈರು ಹಾಜರಾಗುತ್ತಿದ್ದಾರೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಪರೀಕ್ಷೆಗೆ ಸಿದ್ಧತೆ ನಡೆಸದಿರುವ ಕಾರಣ ಗೈರು ಹಾಜರಾಗುತ್ತಿದ್ದಾರೆ. ಇದಕ್ಕೆ ಬೇರೆ ಯಾವುದೇ ಕಾರಣಗಳಿಲ್ಲ ಎಂದು ತಿಳಿಸಿದರು.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಾರ, ಪ್ರಥಮ ಭಾಷೆ ಕನ್ನಡಕ್ಕೆ 20,994, ದ್ವಿತೀಯ ಭಾಷೆ ಇಂಗ್ಲಿಷ್‌ಗೆ 22,063, ಗಣಿತ ಪರೀಕ್ಷೆಗೆ 25,144 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಬುಧವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆಗೆ ಕೂಡ ವಿದ್ಯಾರ್ಥಿಗಳ ಗೈರು ಹಾಜರಿ ಮುಂದುವರಿದಿದ್ದು, 24,873 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಸಮಾಜ ವಿಜ್ಞಾನಕ್ಕೆ ನೋಂದಣಿ ಮಾಡಿಕೊಂಡಿದ್ದ 8,70,429 ವಿದ್ಯಾರ್ಥಿಗಳ ಪೈಕಿ 8,45,556 ವಿದ್ಯಾರ್ಥಿಗಳು ಹಾಜರಾಗಿದ್ದು, 24,873 ಮಂದಿ ಗೈರಾಗಿದ್ದಾರೆ. ಅತಿ ಹೆಚ್ಚು ಗೈರು ಹಾಜರಾಗಿರುವ ಪೈಕಿ ಬಳ್ಳಾರಿ ಜಿಲ್ಲೆಯಲ್ಲಿ 2,473 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ನಂತರ ಕಲಬುರಗಿಯಲ್ಲಿ 2,403, ರಾಯಚೂರು 1,864, ಬೀದರ್ 1,716 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಶುಕ್ರವಾರ (ಏ.8) ತೃತೀಯ ಭಾಷೆ ಹಿಂದಿ ಪರೀಕ್ಷೆ ನಡೆಯಲಿದೆ.
ಸಮಾಜ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಯು ಸೋರಿಕೆಯಾಗಿತ್ತು ಎಂಬುದು ಗಾಳಿಸುದ್ದಿಯಾಗಿದೆ. ಈ ವಿಷಯವನ್ನು ವಿದ್ಯಾರ್ಥಿಗಳು ನಂಬಬಾರದು. ಇಂತಹ ಗಾಳಿ ಸುದ್ದಿ ಹರಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ