ಯಾದಗಿರಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಶಿಕ್ಷಕರು ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಡಿಡಿಪಿಐ ಶಾಂತಗೌಡ ಪಾಟೀಲ ಹೇಳಿದರು.
ಇಲ್ಲಿನ ಅಜಿಂ ಪ್ರಮಜೀ ಫೌಂಡೇಶನ್‌ನಲ್ಲಿ ಆಯೋಜಿಸಿದ್ದ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಷ್ಟವಾಗುವ ಇಂಗ್ಲಿಷ್ ಮತ್ತು ಗಣಿತ, ಉರ್ದು ಶಾಲೆ ಮಕ್ಕಳಿಗೆ ಕನ್ನಡ ಹೀಗೆ ಕಷ್ಟವಾಗುವ ವಿಷಯಗಳನ್ನು ಸುಲಭವಾಗಿ ಹೇಳಿಕೊಡುವ ತಂತ್ರಗಳು, ಕಡಿಮೆ ಅವಧಿಯಲ್ಲಿಯೇ ಹೆಚ್ಚು ಪರಿಣಾಮಕಾರಿಯಾಗಿ ಹೇಗೆ ವಿಷಯಗಳನ್ನು ಮನದಟ್ಟು ಮಾಡಿಸಬೇಕು ಎಂಬುದು ಸೇರಿದಂತೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಿ ಪರೀಕ್ಷೆಗೆ ಸಜ್ಜುಗೊಳಿಸುವ ಬಗ್ಗೆ ಅಂಶಗಳನ್ನು ಸಿದ್ಧಪಡಿಸಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕೆಂದು ಸಲಹೆ ನೀಡಿದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ ರೆಡ್ಡಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವಂತೆ ಹಾಗೂ ಪ್ರತಿ ವಿದ್ಯಾರ್ಥಿ ಉತ್ತೀರ್ಣರಾಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವೆಂದು ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಾಂತಗೌಡ ಪಾಟೀಲ ಕಿವಿಮಾತು ಹೇಳಿದರು.
ಯಾದಗಿರಿ ಜಿಲ್ಲಾ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ನೋಡಲ್ ಅಧಿಕಾರಿ ಡಾ| ಮಲ್ಲಪ್ಪ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಅಶೋಕ ಕುಮಾರ ಕೆಂಭಾವಿ, ಎಪಿಎಫ್ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಅಕ್ಕಮಹಾದೇವಿ, ಪ್ರದೀಪ್ ಇತರರಿದ್ದರು.