ತುಮಕೂರು: ಕೋವಿಡ್ 19 ಸಂಕಷ್ಟದ ನಡುವೆಯೂ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಮತ್ತು ಆತ್ಮವಿಶ್ವಾಸಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರು ಹೇಳಿದರು. ಜಿಪಂ ಸಭಾಂಗಣದಲ್ಲಿ ಭಾನುವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತಂತೆ ಡಿಡಿಪಿಐ ಮತ್ತು ಬಿಇಒಗಳೊಂದಿಗೆ ಪ್ರಗತಿ ಪರಿ ಶೀಲನಾ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಸಿ ನೀರು ತನ್ನಿ: ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿ ಗಳು ಕುಡಿಯಲು ಮನೆಯಿಂದಲೇ ಬಿಸಿ ನೀರನ್ನು ತರುವಂತೆ ಸೂಚಿಸಬೇಕು. ಜೊತೆಗೆ ಪರೀಕ್ಷಾ ಕೇಂದ್ರ ಗಳಲ್ಲಿ ವ್ಯವಸ್ಥಿತವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕೇಂದ್ರಗಳಲ್ಲಿ ಶೌಚಾಲಯದ ಸ್ವತ್ಛತೆಯ ಬಗ್ಗೆ ಗಮನಹರಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಮನಸ್ಥಿತಿ ಕೆಡದಂತೆ ಎಚ್ಚರವಹಿಸಬೇಕು ಎಂದರು.
ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರದಿಂದ ಮನೆ ದೂರವಿದ್ದು, ಯಾವುದೇ ಸಂಚಾರ ವ್ಯವಸ್ಥೆ ಇಲ್ಲದಿದ್ದರೆ, ಅಂತಹ ವಿದ್ಯಾರ್ಥಿಗಳ ವಿವರ ಪಡೆದು ಶಾಲೆಯ ಮುಖ್ಯೋಪಾಧ್ಯಾಯರು ರೂಟ್ ಮ್ಯಾಪ್ ಸಿದ್ಧಪಡಿಸಬೇಕು. ಅವರ ಬಳಿ ಇರುವ ಪ್ರವೇಶ ಪತ್ರವನ್ನು ಉಚಿತ ಬಸ್‌ಪಾಸ್‌ಗಳ ಪರಿಗಣಿಸಲು ನಿರ್ಧರಿಸಲಾಗಿದೆ ಹಾಗೂ ಖಾಸಗಿ ಶಾಲೆಯ ಬಸ್ಸುಗಳನ್ನು ಬಳಸಿಕೊಂಡು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕರೆತರಬೇಕು ಎಂದು ಸೂಚಿಸಲಾಗಿದೆ ಎಂದರು.
ಮಕ್ಕಳಿಗೆ ಮಾಸ್ಕ್ ವಿತರಣೆ: ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳು ತಯಾರಿಸಿರುವ 8.50 ಲಕ್ಷ ಮಾಸ್ಕ್ಗಳನ್ನು ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳಿಗೆ ನೀಡಲಾಗು ತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗುವುದು. ಅನಾರೋಗ್ಯದ ಸೂಚನೆ ಕಂಡು ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವಲಸೆ ಕಾರ್ಮಿಕರ ಮಕ್ಕಳಿಗೆ ಜುಲೈನಲ್ಲಿ ಪರೀಕ್ಷೆ: ವಲಸೆ ಕಾರ್ಮಿಕರ ಮಕ್ಕಳು ಪರೀಕ್ಷೆಯಿಂದ ತಪ್ಪಿಸಿಕೊಂಡರೆ ಜುಲೈನಲ್ಲಿ ಪರೀಕ್ಷೆ ನಡೆಸಲಾಗುವುದು. ಅಂತಹವರನ್ನು ಫ್ರೆಶರ್ ವಿದ್ಯಾರ್ಥಿಗಳು ಎಂದು ಪರಿಗಣಿಸಲಾಗುವುದು. ಪಠ್ಯಪುಸ್ತಕವನ್ನು ಶಾಲೆ ಆರಂಭಿಸಿದ ಮೊದಲ ವಾರದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದೇನೆ ಏಕೆಂದರೆ ಒಂದು ವಿಶೇಷ ಸಂದರ್ಭದಲ್ಲಿ ಹಾಗೂ ವಾತಾವರಣದಲ್ಲಿ ಪರೀಕ್ಷೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಸುಮಾರು 8,48,200 ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ನಡೆಸುವ ಬಗ್ಗೆ ಸಾಕಷ್ಟು ಜನ ಶಿಕ್ಷಣ ಸಮಾಲೋಚಕರ ಜೊತೆ ಚರ್ಚೆ ಮಾಡಿ ಹಾಗೂ ಕೋರ್ಟ್ ಹಸಿರು ನಿಶಾನೆ ತೋರಿದ ನಂತರ ನಾವು ಪರೀಕ್ಷೆ ನಡೆಸಲು ನಿರ್ಧಾರ ತೆಗೆದುಕೊಂಡೆವು ಎಂದು ಸಚಿವರು ಹೇಳಿದರು.
ಶಾಸಕ ಜಿ.ಬಿ ಜ್ಯೋತಿಗಣೇಶ್, ಜಿಪಂ ಸಿಇಒ ಶುಭಾ ಕಲ್ಯಾಣ್, ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಯಟ್‌ನ ಪ್ರಾಂಶುಪಾಲ ಮಂಜುನಾಥ್, ಡಿಡಿಪಿಐ ಗಳಾದ ಎಂ.ಆರ್ ಕಾಮಾಕ್ಷಿ, ರೇವಣ ಸಿದ್ಧಪ್ಪ ಇದ್ದರು.
ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಆಯಾ ಜಿಲ್ಲೆ ಯಲ್ಲಿ ನಡೆಸುವ ಬಗ್ಗೆ ಇನ್ನು ಎರಡು ಮೂರು ದಿನದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು.
-ಎಸ್.ಸುರೇಶ್‌ಕುಮಾರ್, ಶಿಕ್ಷಣ ಸಚಿವ