Advertisement

ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ; 9 ಮಂದಿ ಡಿಬಾರ್‌

06:00 AM Mar 24, 2018 | Team Udayavani |

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾದ ಮೊದಲ ದಿನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ನಕಲು ಮಾಡಲು ಯತ್ನಿಸಿ ಒಂಬತ್ತು  ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದಾರೆ. ಜತೆಗೆ ಪರೀಕ್ಷೆಯ ಮೊದಲ ದಿನವೇ 26,799 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

Advertisement

ಧಾರವಾಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಕಲು ಮಾಡಲು ಯತ್ನಿಸಿದ ಆರು ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದು, ಬಾಗಲಕೋಟೆ, ಕಲಬುರಗಿ ಹಾಗೂ ಚಿಕ್ಕೋಡಿಯಲ್ಲಿ ತಲಾ ಒಬ್ಬರು ವಿದ್ಯಾರ್ಥಿಗಳು ನಕಲು ಮಾಡುವಾಗ ಸಿಕ್ಕಿಬಿದ್ದಿದ್ದಾರೆ.  

ಹಾವೇರಿ ಜಿಲ್ಲೆಯ ಗುತ್ತಲದ ಆರ್‌.ಆರ್‌.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷಾ ಕಾರ್ಯದಲ್ಲಿ ನಿರತರಾಗಿದ್ದ ಎಸ್‌.ಆರ್‌.ಕೊರವರ (57) ಎಂಬುವರು ತೀವ್ರ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆಯೂ ನಡೆದಿದೆ.

ಜತೆಗೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಹಕರಿಸಿದ ಅಧಿಕಾರಿಗಳನ್ನು ಸಹ ಇಲಾಖೆ ಅಮಾನತುಗೊಳಿಸಿದೆ. ಬೆಳಗಾವಿಯ ರಾಯಭಾಗ ತಾಲೂಕಿನಲ್ಲಿ ಸಾಮೂಹಿಕ ನಕಲು ಪ್ರಕರಣ ದಾಖಲಾಗಿದ್ದು, ಚಾಮರಾಜನಗರದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪತ್ರಿಕೆಯಲ್ಲಿ ಬೇರೊಂದು ಪರೀಕ್ಷಾ ಕೇಂದ್ರದ ಹೆಸರು ಮುದ್ರಣವಾಗಿದ್ದರಿಂದ ಮೂವರು ವಿದ್ಯಾರ್ಥಿಗಳು ಮೊದಲ ದಿನ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಮಲಗಿ ಬರೆಯಲು ಅವಕಾಶ: ಬೆಂಗಳೂರಿನ ಶಾಲೆಯೊಂದರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ರುಮಾನ್‌ ಮಲಗಿ ಪರೀಕ್ಷೆ ಬರೆಯಲು ಅವಕಾಶ ನೀಡುವ ಮೂಲಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾನವೀಯತೆ ಮೆರೆದಿದೆ. ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ಮಲ್ಲೇಶ್ವರದ ಎಂಇಎಸ್‌ ಕಿಶೋರ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದ ರುಮಾನ್‌ ಶರೀಫ್‌ಗೆ ಬೆನ್ನುಹುರಿ ಸಮಸ್ಯೆ ಉಂಟಾಗಿತ್ತು.

Advertisement

ಉತ್ತರ ಪತ್ರಿಕೆಯಲ್ಲಿ ಲೋಪ: ಬೆಂಗಳೂರಿನ ಪರೀಕ್ಷಾ ಕೇಂದ್ರ ಒಂದರಲ್ಲಿ ಉತ್ತರ ಪತ್ರಿಕೆಯಲ್ಲಿಯೇ ಲೋಪದೋಷ ಕಂಡುಬಂದಿದೆ. ಕೆಲವು ಉತ್ತರ ಪತ್ರಿಕೆಯಲ್ಲಿ ನೀಡುವ ಕ್ರಮಸಂಖ್ಯೆ ಬಿಟ್ಟು ಹೋಗಿದ್ದರೆ, ಇನ್ನು ಕೆಲವು ಉತ್ತರ ಪತ್ರಿಕೆಗಳಲ್ಲಿ ಪುಟಗಳ ಸಂಖ್ಯೆ ಕಡಿಮೆ ಇರುವುದು ವರದಿಯಾಗಿದೆ. ಈ ವೇಳೆ ಕೊಠಡಿ ಮೇಲ್ವಿಚಾರಕರು ಹೆಚ್ಚುವರಿ ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಇದರೊಂದಿಗೆ ಬೆಂಗಳೂರಿನ ಅಬ್ಬಿಗೆರೆ ಮತ್ತು ಚಿಕ್ಕಬಾಣವಾರದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ ಎಂಬ ಆರೋಪವನ್ನು ಕ್ಯಾಮ್ಸ್‌ ಸಂಘಟನೆ ಮಾಡಿದೆ.

ಪ್ರಶ್ನೆ ಪತ್ರಿಕೆ ಬಹಿರಂಗ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದೆ. ಪರೀಕ್ಷಾ ಕೊಠಡಿಯಲ್ಲಿದ್ದ ವಿದ್ಯಾರ್ಥಿಯಿಂದ ಅನಾಮದೇಯ ವ್ಯಕ್ತಿಯೊಬ್ಬ ಕಿಟಕಿ ಮೂಲಕ ಪ್ರಶ್ನೆ ಪತ್ರಿಕೆ ಪಡೆದು ಮೊಬೈಲ್‌ನಲ್ಲಿ ಫೋಟೊ ತೆಗೆದು ವಾಟ್ಸ್‌ಆ್ಯಪ್‌ ಮೂಲಕ ಹರಿ ಬಿಟ್ಟಿದ್ದಾನೆ. ಪರೀಕ್ಷೆ ಆರಂಭವಾದ ಒಂದೂವರೆ ಗಂಟೆಯ ನಂತರ ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವುದು ತಿಳಿದಿದೆ. ಈ ಸಂಬಂಧ ಕೊಠಡಿ ಮೇಲ್ವಿಚಾರಕರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದೆ.

ಮರು ಪರೀಕ್ಷೆ ನಡೆಸಲ್ಲ
ಬೆಂಗಳೂರು:
ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸ್ಪಷ್ಟನೆ ನೀಡಿದೆ. ಸೋರಿಕೆಗೆ ಸಹಕರಿಸಿದ ಕೊಠಡಿ ಮೇಲ್ವಿಚಾರಕ ಹಾಗೂ ಪ್ರಶ್ನೆ ಪತ್ರಿಕೆ ಅಧೀಕ್ಷಕರನ್ನು ಅಮಾನತು ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೆ ಈಡಾಗದೆ ಮುಂದಿನ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು ಎಂದು ಮಂಡಳಿ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next