ಬೆಂಗಳೂರು: ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ಮಧ್ಯ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸರಪಣಿ ಮುಂದುವರಿದಿದೆ. ಸೋಮವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ರವಿವಾರವೇ ಸೋರಿಕೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಸೆಪ್ಟೆಂಬರ್ 24ಕ್ಕೆ ಮಧ್ಯ ವಾರ್ಷಿಕ ಪರೀಕ್ಷೆ ಆರಂಭಗೊಂಡಾಗ ಮಂಡಳಿ ಕಳುಹಿಸುವ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆಯ ಹಿಂದಿನ ದಿನವೇ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆಯುವ ಅವಕಾಶವನ್ನು ಮುಖ್ಯೋಪಾಧ್ಯಾಯರಿಗೆ ನೀಡಲಾಗಿತ್ತು.
ಆದರೆ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಯ ಹಿಂದಿನ ದಿನವೇ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಎಚ್ಚೆತ್ತುಕೊಂಡಿದ್ದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ)ಯು ಸೆಪ್ಟೆಂಬರ್ 27ಕ್ಕೆ ಸುತ್ತೋಲೆಯೊಂದನ್ನು ಹೊರಡಿಸಿ ಪರೀಕ್ಷೆ ನಡೆಯುವ ದಿನ ಬೆಳಗ್ಗೆ 6 ಗಂಟೆಗೆ ಶಾಲಾ ಮುಖ್ಯೋಪಾಧ್ಯಾಯರ ಲಾಗಿನ್‌ಗೆ ಪ್ರಶ್ನೆ ಪತ್ರಿಕೆ ಕಳುಹಿಸಲಾಗುವುದು, ಅವರು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಪ್ರಶ್ನೆ ಪತ್ರಿಕೆ ಹಂಚಬೇಕು ಎಂದು ಸೂಚಿಸಲಾಗಿತ್ತು.
ಅದರಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ಸೋಮವಾರ ಬೆಳಗ್ಗೆ 6 ಗಂಟೆಗೆ ಸಿಗಬೇಕಿದ್ದ ಸಮಾಜ ವಿಜ್ಞಾನದ ಪ್ರಶ್ನೆ ಪತ್ರಿಕೆ ರವಿವಾರ ತಡರಾತ್ರಿಯೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗಳ ವಿವಿಧ ಖಾತೆಗಳಲ್ಲಿ ಪ್ರಶ್ನೆ ಪತ್ರಿಕೆ ಪ್ರಸಾರವಾಗಿದೆ ಹಾಗೆಯೇ ಹಲವು ವಿದ್ಯಾರ್ಥಿಗಳಿಗೆ ತಲುಪಿದೆ ಎನ್ನಲಾಗಿದೆ.