Advertisement

ಎಸೆಸೆಲ್ಸಿ ಫಲಿತಾಂಶ : ಕುಂದಾಪುರ ವಲಯಕ್ಕೆ ಅಗ್ರಸ್ಥಾನ

06:10 AM May 08, 2018 | |

ಕುಂದಾಪುರ: ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ. ಕಳೆದ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದ 5 ವಲಯಗಳಲ್ಲಿ ಈ ಬಾರಿಯೂ ಕುಂದಾಪುರ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ರಾಜ್ಯದಲ್ಲಿ 13ನೇ ಹಾಗೂ ಕರಾವಳಿಯಲ್ಲಿ 10 ನೇ ಸ್ಥಾನ ಗಳಿಸಿದ ಮೂಡಬಿದಿರೆ ಅನಂತರದ ಸ್ಥಾನವನ್ನು ಕುಂದಾಪುರ ವಲಯ ಪಡೆದುಕೊಂಡಿದೆ. 

Advertisement

ಜಿಲ್ಲೆಯ 5 ವಲಯಗಳ ಪೈಕಿ ಕುಂದಾಪುರ ಪ್ರಥಮ, ಕಾರ್ಕಳ ಎರಡನೇ ಸ್ಥಾನ, ಉಡುಪಿ 3ನೇ, ಬ್ರಹ್ಮಾವರ 4ನೇ ಹಾಗೂ ಬೈಂದೂರು ವಲಯ 5ನೇ ಸ್ಥಾನ ಗಳಿಸಿದೆ. ಕಳೆದ ಬಾರಿಯೂ ಉಡುಪಿ ಜಿಲ್ಲೆಯ 5 ವಲಯಗಳ ಪೈಕಿ ಕುಂದಾಪುರ ಪ್ರಥಮ ಸ್ಥಾನ ಪಡೆದಿತ್ತು. ಬೈಂದೂರು ಕಳೆದ ಬಾರಿಯಂತೆ ಈ ಬಾರಿಯೂ 5ನೇ ಸ್ಥಾನ ಪಡೆದರೂ ಫಲಿತಾಂಶದಲ್ಲಿ  ಹೆಚ್ಚಳವಾಗಿದೆ. 

ಕುಂದಾಪುರ: 5 ಶಾಲೆಗಳಿಗೆ ಶೇ. 100 ಫಲಿತಾಂಶ
ಕುಂದಾಪುರ ವಲಯದಲ್ಲಿ 21 ಸರಕಾರಿ, 7 ಅನುದಾನಿತ ಹಾಗೂ 14 ಅನುದಾನ ರಹಿತ ಸೇರಿ ಒಟ್ಟು 41 ಪ್ರೌಢಶಾಲೆಗಳ ಪೈಕಿ ಸುಣ್ಣಾರಿ ಎಕ್ಸಲೆಂಟ್‌ ಪ.ಪೂ. ಕಾಲೇಜು (ಪ್ರೌಢಶಾಲೆ ವಿಭಾಗ), ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗಂಗೊಳ್ಳಿಯ ಎಸ್‌.ವಿ. ಸರಸ್ವತಿ ವಿದ್ಯಾಲಯ, ಸಿದ್ದಾಪುರದ ಸರಸ್ವತಿ ವಿದ್ಯಾಲಯ ಹಾಗೂ ಕೋಟೇಶ್ವರದ ಮೊರಾರ್ಜಿ ದೇಸಾಯಿ ಪ್ರೌಢಶಾಲೆಗಳು ಶೇ. 100 ಫಲಿತಾಂಶ ಪಡೆದುಕೊಂಡಿದೆ. ಅದರಲ್ಲೂ ಕೋಟೇಶ್ವರದ ಮೊರಾರ್ಜಿ ದೇಸಾಯಿ ಪ್ರೌಢಶಾಲೆ ಕಳೆದ 5 ವರ್ಷಗಳಿಂದ ಶೇ. 100 ಫಲಿತಾಂಶ ಗಳಿಸಿದೆ. ಪರೀಕ್ಷೆ ಬರೆದ ಒಟ್ಟು 2373 ವಿದ್ಯಾರ್ಥಿಗಳ ಪೈಕಿ 2,140 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೋಟೇಶ್ವರ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಸುಜಾತ ಭಟ್‌ -622 ಹಾಗೂ ಕುಂದಾಪುರದ ವೆಂಕಟರಮಣ ಪ್ರೌಢಶಾಲೆಯ ಎಸ್‌.ಪಿ. ಶಿಲ್ಪಾ -622 ಅಂಕಗಳನ್ನು ಪಡೆದು ಕುಂದಾಪುರ ವಲಯಕ್ಕೆ ಪ್ರಥಮ ಸ್ಥಾನಿಗರಾಗಿದ್ದಾರೆ. 

ಬೈಂದೂರು: 4 ಶಾಲೆಗಳಿಗೆ ಶೇ. 100 ಫಲಿತಾಂಶ
ಬೈಂದೂರು ವಲಯದಲ್ಲಿ ಸರಕಾರಿ 16, ಅನುದಾನಿತ  5, ಅನುದಾನ ರಹಿತ 11 ಸೇರಿ ಒಟ್ಟು 32 ಪ್ರೌಢಶಾಲೆಗಳಿದ್ದು, ಈ ಪೈಕಿ ಸರಕಾರಿ ಪ್ರೌಢಶಾಲೆ ಕಂಬದಕೋಣೆ, ಸರಕಾರಿ ಪ್ರೌಢಶಾಲೆ ಬಿಜೂರು, ಸರಕಾರಿ ಪ್ರೌಢಶಾಲೆ ತಲ್ಲೂರು, ವಿವೇಕಾನಂದ ಪ್ರೌಢಶಾಲೆಯ ಉಪ್ಪುಂದ ಶಾಲೆಗಳು ಶೇ. 100 ಫಲಿತಾಂಶ ಗಳಿಸಿದೆ. ಪರೀಕ್ಷೆ ಬರೆದ 2,019 ವಿದ್ಯಾರ್ಥಿಗಳ ಪೈಕಿ 1,718 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೊಲ್ಲೂರು ಮೂಕಾಂಬಿಕಾ ಪ್ರೌಢಶಾಲೆಯ ವಿದ್ಯಾರ್ಥಿ ಗೋಪಾಲಕೃಷ್ಣ ಹೆಗಡೆ 618 ಅಂಕ ಗಳಿಸಿ ಬೈಂದೂರು ವಲಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. 

ಫಲಿತಾಂಶ ಹೆಚ್ಚಳಕ್ಕೆ  ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳು
-  ಪ್ರತಿ ತಿಂಗಳು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಕರೆದು ಎಸೆಸೆಲ್ಸಿ ಫಲಿತಾಂಶದ ಕುರಿತ ಪ್ರಗತಿ ಪರಿಶೀಲನೆ.
-  ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರಗಳನ್ನು ನಡೆಸಿದೆ.
-  ಪೂರ್ವ ಸಿದ್ಧತಾ ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆಗಳನ್ನು ಆಧರಿಸಿ ವಿಶೇಷ ಬೋಧನೆ ನಡೆಸಲಾಗಿದೆ.
-  ಕೆಲವು ಶಾಲೆಗಳಲ್ಲಿ ಸಂಜೆ ಹಾಗೂ ರವಿವಾರ ವಿಶೇಷ ತರಗತಿಗಳನ್ನು ನಡೆಸಲಾಗಿದೆ.
-  ವಿಷಯವಾರು ಶಿಕ್ಷಕರಿಗೆ ವಿಶೇಷ ತರಬೇತಿಗಳನ್ನು ನಡೆಸಲಾಗಿದೆ. 
-  ಕಲಿಕೆಯಲ್ಲಿ ಉತ್ತಮವಾಗಿರುವ ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್‌ ಪಡೆಯಲು ಸಹಕಾರಿಯಾಗುವಂತೆ 1 ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.

Advertisement

ಹೆತ್ತವರಿಗೂ ಮಾರ್ಗದರ್ಶನ
ವರ್ಷದಲ್ಲಿ ಎರಡು ಬಾರಿ ಎಸೆಸೆಲ್ಸಿ ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆದು ಅವರಿಗೂ ಮಾರ್ಗದರ್ಶನಗಳನ್ನು ಮಾಡಿದ್ದೇವೆ. ಸಹ ಶಿಕ್ಷಕರಿಗೆ ವಿಷಯವಾರು ಕಾರ್ಯಾಗಾರ ನಡೆಸಲಾಗಿದೆ. ಕೊರಗ ವಿದ್ಯಾರ್ಥಿಗಳಿಗೆ ಸನಿವಾಸ ಶಿಬಿರ, ಮುಸ್ಲಿಂ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ ನಡೆಸಲಾಗಿದೆ. ಇದರಿಂದ ಉತ್ತಮ ಫಲಿತಾಂಶ ಬಂದಿದೆ.
                        
– ಅಶೋಕ ಕಾಮತ್‌, ಕ್ಷೇತ್ರ ಶಿಕ್ಷಣಾಧಿಕಾರಿ, 
ಕುಂದಾಪುರ ವಲಯ

ರವಿವಾರವೂ ತರಗತಿ
ಫಲಿತಾಂಶ ಹೆಚ್ಚಳಕ್ಕೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಕಳೆದ ಬಾರಿ ಶೇ. 78. 58 ಫಲಿತಾಂಶ ಬಂದರೆ, ಈ ಬಾರಿ ಶೇ. 85.09 ಫಲಿತಾಂಶ ಬಂದಿದೆ. ಶಾಲೆಗಳಲ್ಲಿ ವಿಶೇಷ ಶಿಬಿರ, ಕಾರ್ಯಾಗಾರ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರವಿವಾರವೂ ತರಗತಿಗಳನ್ನು ನಡೆಸಲಾಗಿದೆ. ಪ್ರಶಸ್ತಿ ವಿಜೇತ ಪ್ರಾಧ್ಯಾಪಕ ಪುತ್ತೂರಿನ ಶಶಿಧರ ಅವರನ್ನು ಕರೆಸಿ ಸರಣಿ ತರಬೇತಿ ನಡೆಸಲಾಗಿದೆ.   
– ಒ.ಆರ್‌. ಪ್ರಕಾಶ್‌, ಕ್ಷೇತ್ರ ಶಿಕ್ಷಣಾಧಿಕಾರಿ, 
ಬೈಂದೂರು ವಲಯ

ವಲಯವಾರು ಫಲಿತಾಂಶ 
ಕುಂದಾಪುರ    90.18
ಕಾರ್ಕಳ         89.44
ಉಡುಪಿ         87.47
ಬೈಂದೂರು    85.09

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next