Advertisement
ಮಂಗಳವಾರ ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರು ಮತ್ತು ಬಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದ ನಂತರ ಮಾತನಾಡಿದ ಅವರು, ಹೊಸ ರೀತಿಯಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನು ಬರೆಯುವ ಕುರಿತು ಮಕ್ಕಳ ಮನಃಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು, ಕಳೆದ ಬಾರಿಯಂತೆ ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರು ಈ ಬಾರಿಯೂ ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ ಮಕ್ಕಳ ಹಿತಕ್ಕಾಗಿ ಶ್ರಮಿಸಬೇಕೆಂದು ಸೂಚನೆ ನೀಡಿದರು.
Related Articles
Advertisement
ಯಾವುದೇ ಕಾರಣದಿಂದಲೂ ಯಾವುದೇ ಒಂದು ಮಗುವೂ ಸಹ ಪರೀಕ್ಷೆಯಿಂದ ವಂಚಿತವಾಗದಂತೆ ಕ್ರಮ ವಹಿಸುವುದೂ ಸೇರಿದಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿದ ಎಸ್‍ಒಪಿ ಅನುಷ್ಠಾನ ಕುರಿತು ಚರ್ಚಿಸಿ, ಅಗತ್ಯವಿರುವ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆ ಮಾಡಲು ಸಚಿವರು ಸೂಚನೆ ನೀಡಿದರು. ಕಳೆದ ವರ್ಷ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತವಾಗದೇ ಇರುವುದು ಮತ್ತು ಒಬ್ಬನೇ ಒಬ್ಬ ಕೊನೆಯ ಕುಗ್ರಾಮದ ವಿದ್ಯಾಥಿಯೊಬ್ಬನಿಗಾಗಿ ಒಂದು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿದ್ದನ್ನು ಅವರು ಸ್ಮರಿಸಿದರು.
ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ನೀಡಿದ ಪ್ರಶ್ನೆ ಪತ್ರಿಕೆಗಳ ಒಎಂಆರ್ ಶೀಟ್ ಸೇರಿದಂತೆ ಆಯಾ ಜಿಲ್ಲೆಗಳಲ್ಲಿ ರೂಪಿಸಲಾದ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಮಕ್ಕಳು ಉತ್ತರಿಸಿ ಪರೀಕ್ಷಾ ಪದ್ಧತಿ ಕುರಿತು ಆತ್ಮವಿಶ್ವಾಸ ಮೂಡಿಸಿಕೊಂಡಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಮಕ್ಕಳ ಮನೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಿ ಅವುಗಳನ್ನು ಪಡೆದುಕೊಂಡು ಮಾರ್ಗದರ್ಶನ ನೀಡಲಾಗಿದೆ. ವೆಬಿನಾರ್, ವಾಟ್ಸಪ್‍ಗಳ ಮೂಲಕ ಹಾಗೆಯೇ ಕೆಲವೆಡೆಗಳಲ್ಲಿ ಮಕ್ಕಳ ಪೋಷಕರ ಉಪಸ್ಥಿತಿಯಲ್ಲಿ ಪ್ರಶ್ನೆ ಪತ್ರಿಕೆ ಉತ್ತರಿಸಲು ಮಕ್ಕಳಿಗೆ ತಿಳಿಹೇಳಲಾಗಿದ್ದು, ಪರೀಕ್ಷೆ ಕುರಿತು ಮಕ್ಕಳು ಮತ್ತು ಪೋಷಕರಲ್ಲಿ ವಿಶ್ವಾಸ ಮೂಡುವಂತಹ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದೂ ಸಚಿವರು ವಿವರಿಸಿದರು.
ಈಗಾಗಲೇ ಆಯಾ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ಪರೀಕ್ಷೆ ಸಿದ್ಧತೆ ಕುರಿತು ಚಚಿಸಿ ವಿವಿಧ ಇಲಾಖೆ ಅಧಿಕಾರಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಕುರಿತು ಸೂಚನೆ ನೀಡಿದ್ದಾರೆ. ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳು ಪರೀಕ್ಷಾ ಕೇಂದ್ರದ ಸ್ಯಾನಿಟೈಸೇಷನ್ ಮಾಡುವ ಕುರಿತು ಸೂಚನೆಗಳನ್ನು ನೀಡಿದ್ದಾರೆ. ಸಾರಿಗೆ ವ್ಯವಸ್ಥೆಯ ಕೊರತೆಯಿರುವ ಮಕ್ಕಳನ್ನು ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಪರೀಕ್ಷೆಗೆ ಬಹಳ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬರುತ್ತಿರುವುದರಿಂದ ಮಕ್ಕಳು ಕೇಂದ್ರದಿಂದ ಹೊರಡುವಾಗ ಅವರಿಗೆ ಲಘು ಉಪಹಾರದ ವ್ಯವಸ್ಥೆಯನ್ನೂ ಕೆಲ ಜಿಲ್ಲೆಗಳಲ್ಲಿ ಮಾಡಲಾಗಿದೆ. ಅದೇ ರೀತಿ ಉಳಿದ ಜಿಲ್ಲೆಗಳಲ್ಲಿ ಲಘು ಉಪಹಾರ, ಬಿಸ್ಕತ್ ಇಲ್ಲವೇ ನೀರಿನ ವ್ಯವಸ್ಥೆ ಹಾಗೆಯೇ ಮಾಸ್ಕ್, ಸ್ಯಾನಿಟೈಸರ್ ಒದಗಿಸಲು ಯಾವುದೇ ಸಂಘಸಂಸ್ಥೆಗಳು ಮುಂದೆಬಂದರೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಚಿವರು ಸಲಹೆ ನೀಡಿದದರು. ಕೆಲ ಜಿಲ್ಲೆಗಳಲ್ಲಿ ಶಾಸಕರು, ಸಂಘ ಸಂಸ್ಥೆಗಳು ಉದಾರವಾಗಿ ಇಂತಹ ಕೊಡುಗೆಗಳಿಗೆ ಮುಂದೆ ಬಂದಿದ್ದು ಅವುಗಳನ್ನು ಪಡೆದುಕೊಳ್ಳಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು ಎಂದು ಸಚಿವರು ತಿಳಿಸಿದರು.