ರಾಜ್ಯಾದ್ಯಂತ ಒಟ್ಟು 236 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದೆ. ಈ ಬಾರಿ ಪರೀಕ್ಷೆ ಬರೆದಿರುವ 8.42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ 50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. “ಮೌಲ್ಯಮಾಪನ ಕಾರ್ಯಕ್ಕೆ ಒಟ್ಟು 73 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ನಿಯೋಜಿಸಲಾಗಿದೆ” ಎಂದು ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (ಕೆಎಸ್‌ಇಎಬಿ) ನಿರ್ದೇಶಕ (ಪರೀಕ್ಷೆಗಳು) ಎಚ್.ಎನ್.ಗೋಪಾಲಕೃಷ್ಣ ಅವರು ಮಾಹಿತಿ ನೀಡಿದ್ದಾರೆ.
Advertisement
ಮಾ.31ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಂಡಿತ್ತು. ಶನಿವಾರ ಸಮಾಜ ವಿಜ್ಞಾನ ಪರೀಕ್ಷೆ ಮುಕ್ತಾಯಗೊಳ್ಳುವುದರೊಂದಿಗೆ ಈ ವರ್ಷದ ಪರೀಕ್ಷೆ ಮುಕ್ತಾಯಗೊಂಡಿದೆ. ಬೆಳಗಾವಿ, ಕಲಬುರಗಿಯಲ್ಲಿ ನಕಲಿನ ಪ್ರಕರಣಗಳು ವರದಿಯಾಗಿದ್ದು ಹೊರತು ಪಡಿಸಿ ಉಳಿದಂತೆ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.ಈ ಬಾರಿ ಪರೀಕ್ಷೆಗೆ 8.42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿಯಾಗಿ ಪರೀಕ್ಷೆ ಬರೆದಿದ್ದರು.