ತುಮಕೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಜೂ.25ರಿಂದ ನಿಗದಿಪಡಿಸಿದ್ದು ಮಕ್ಕಳ ಭವಿಷ್ಯವನ್ನು ಗಮನ ದಲ್ಲಿಟ್ಟುಕೊಂಡು ದೂರವಾಣಿ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿಷಯಗಳ ಪುನರ್ ಮನನ ಮಾಡುವ ದೃಷ್ಟಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಕಳೆದ ತಿಂಗಳಷ್ಟೇ ಡಯಟ್ ವತಿಯಿಂದ 6 ದಿನಗಳ ಕಾಲ ಹಮ್ಮಿಕೊಂಡಿದ್ದ ಫೋನ್ -ಇನ್ ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಗಳಿಗೆ ವಿಷಯವಾರು ಪ್ರಶ್ನೆಗಳಿಗೆ ಉತ್ತರ ನೀಡಲಾಗಿತ್ತು. ಈಗ ಮತ್ತೂಂದು ಹೆಜ್ಜೆ ಮುಂದಿಟ್ಟ ಇಲಾಖೆ ಫೋನ್ ಔಟ್ ಎಂಬ ವಿನೂತನ ಕಾರ್ಯಕ್ರಮ ನಡೆಯುತ್ತಿದ್ದು ಇದು ಮೇ ಅಂತ್ಯದವರೆಗೆ ಮುಂದುವರಿಸುವ ಉದ್ದೇಶ ವನ್ನು ಇಲಾಖೆ ಹೊಂದಿದೆ.
ಜೂ.25ರಿಂದ ಪರೀಕ್ಷೆ: ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ಜೂ.25ರಿಂದ ಪರೀಕ್ಷೆ ನಿಗದಿ ಪಡಿಸಿದೆ. ಲಾಕ್‌ಡೌನ್ ಅವಧಿಯಲ್ಲಿ ಪಠ್ಯವನ್ನು ಮರೆಯದೆ ಮಕ್ಕಳು ಪರೀಕ್ಷೆ ಉತ್ತಮವಾಗಿ ಬರೆಯ ಬೇಕೆನ್ನುವ ಸಲುವಾಗಿ ಫೋನ್‌ಔಟ್ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಉದಯವಾಣಿಗೆ ತಿಳಿಸಿದ್ದಾರೆ.
21 ಸಾವಿರ ವಿದ್ಯಾರ್ಥಿಗಳ ನೋಂದಣಿ: ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸುಮಾರು 21 ಸಾವಿರ ವಿದ್ಯಾರ್ಥಿ ಗಳು ನೋಂದಾಯಿಸಿಕೊಂಡಿ ದ್ದಾರೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡವಷ್ಟೇ ಅಲ್ಲದೆ ಆಂಗ್ಲ ಮಾಧ್ಯಮದಲ್ಲೂ ಪುನರ್‌ಮನನ ಮಾಡುವ ಉದ್ದೇಶ ಹೊಂದಲಾಗಿದೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಆದ್ಯತೆ: ಪ್ರಮುಖವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರತಿ ದಿನ ನುರಿತ ಸಂಪನ್ಮೂಲ ಶಿಕ್ಷಕರು ಮತ್ತು ವಿಷಯ ಪರಿವೀಕ್ಷಕರ ತಂಡವು ತಮ್ಮ ಮೊಬೈಲ್‌ನಿಂದ ವಿದ್ಯಾರ್ಥಿಗಳಿಗೆ ಕರೆ ಮಾಡುವ ಮೂಲಕ ಪರೀಕ್ಷಾ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ಪ್ರತಿದಿನ 200 ವಿದ್ಯಾರ್ಥಿಗಳೊಂದಿಗೆ ಸಂವಾದ: ಫೋನ್‌ಔಟ್ ಕಾರ್ಯಕ್ರಮವು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನಡೆಯು ತ್ತಿದ್ದು, ಕಾರ್ಯ ಕ್ರಮದಲ್ಲಿ ಪ್ರತಿ ದಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ವಿಷಯಗಳ ಪುನರ್‌ಮನನದೊಂದಿಗೆ ಸಂವಾದ ನಡೆಸಲಾಗುತ್ತಿದೆ.
ಪ್ರತಿದಿನ ಫೋನ್ ಔಟ್ ಕಾರ್ಯಕ್ರಮ ಕ್ಕಾಗಿ ಉಪನಿರ್ದೇಶಕರ ಕಚೇರಿಗೆ 10 ವಿವಿಧ ವಿಷಯ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಲಾಗುತ್ತಿದ್ದು, ತುಮಕೂರು ನಗರದಲ್ಲಿ ವಾಸಿಸುವ ಶಿಕ್ಷಕರನ್ನೇ ಬಳಸಿಕೊಳ್ಳಲಾಗುತ್ತಿದೆ. ಒಟ್ಟಾರೆ ಸುಮಾರು 200 ಶಿಕ್ಷಕರನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗು ವುದು. ಗಣಿತ, ಕನ್ನಡ, ವಿಜ್ಞಾನ, ಸಮಾಜ, ಹಿಂದಿ, ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿ ಪರಿಹರಿಸಿ ಕೊಳ್ಳಬಹುದು.
ವಾಟ್ಸಾಪ್‌ನಲ್ಲಿಯೂ ಪ್ರಶ್ನೋತ್ತರ ವಿನಿಮಯ: ಕೆಲವೊಮ್ಮೆ ಪೋಷಕರು ಮನೆಯಿಂದ ಹೊರ ಗಡೆ ಇದ್ದ ಸಂದರ್ಭಗಳಲ್ಲಿ ನೇರವಾಗಿ ವಿದ್ಯಾರ್ಥಿ ಗಳೊಂದಿಗೆ ದೂರವಾಣಿ ಸಂಪರ್ಕ ಸಾಧಿ ಸಲು ಅಸಾಧ್ಯ ವಾದಾಗ ಪೋಷಕರು ಮನೆಗೆ ಬಂದಾಗ ಸಂಬಂಧಿಸಿದ ಶಿಕ್ಷಕರ ಮೊಬೈಲ್ ಸಂಖ್ಯೆಗೆ ವಿದ್ಯಾರ್ಥಿಗಳು ಮರುಕರೆ ಮಾಡಿ ಸಂವಾದ ನಡೆಸಲು ಅವಕಾಶವಿದೆ.
ಯೂಟ್ಯೂಬ್ ಮೂಲಕ ಮನರಂಜನೆ: “ಮಕ್ಕಳನ್ನು ಕ್ರಿಯಾತ್ಮಕಗೊಳಿಸಲು “ಮಕ್ಕಳವಾಣಿ” ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವಿವಿಧ ಚಟಿವಟಿಕೆಗಳನ್ನು ಪರಿಚಯಿ ಸಲಾಗಿದೆ. ಓದಿನ ನಡುವೆ ಮನಸ್ಸನ್ನು ಉಲ್ಲಸಿತಗೊಳಿಸಲು ಈ ಮಕ್ಕಳವಾಣಿ ಕಾರ್ಯಕ್ರಮ ಸಹಕಾರಿಯಾಗಲಿದೆ. ಇಲಾಖೆಯು ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರಿಂದ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆ ಪಟ್ಟಿಯನ್ನು ಪಡೆದಿದ್ದು, ಸಾಧ್ಯವಾದಷ್ಟು ಜಿಲ್ಲೆಯ ಎಲ್ಲ ತಾಲೂಕುಗಳ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಪರ್ಕಿಸುವ ಹಾಗೂ ಪರೀಕ್ಷೆಯ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಡಿಡಿಪಿಐ ಎಂ.ಆರ್. ಕಾಮಾಕ್ಷಿ ತಿಳಿಸಿದ್ದಾರೆ.