Advertisement

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

11:04 PM Sep 13, 2024 | Team Udayavani |

ಕೇಂದ್ರ ಸರಕಾರದ ವಿವಿಧ ಇಲಾಖೆ, ಮಂಡಳಿ, ಸಂಸ್ಥೆಗಳ ನಾನ್‌ ಗೆಜೆಟೆಡ್‌ ಹುದ್ದೆಗಳಿಗೆ ನೇಮಕಾತಿ ನಡೆಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿರುವ ಸಿಬ್ಬಂದಿ ನೇಮಕಾತಿ ಆಯೋಗ(ಎಸ್‌ಎಸ್‌ಸಿ) ಇಡೀ ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ನ್ಯಾಯಯುತ ಮತ್ತು ಪಾರದರ್ಶಕವಾಗಿ ನಡೆಸಲು ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ.

Advertisement

ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ವಿವಿಧ ಪರೀಕ್ಷೆಗಳು ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮಗಳು ನಡೆಯುತ್ತಿರುವ ಪ್ರಕರಣಗಳು ಪದೇಪದೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಸಿ ಎಲ್ಲ ತೆರನಾದ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಕಠಿನ ನಿಲುವನ್ನು ತನ್ನದಾಗಿಸಿಕೊಳ್ಳಲು ತೀರ್ಮಾನಿಸಿರುವ ಎಸ್‌ಎಸ್‌ಸಿ, ಈ ಸಂಬಂಧ ವಿಶೇಷ ಪ್ರಕಟನೆಯೊಂದನ್ನು ಹೊರಡಿಸಿದೆ. ಕೇಂದ್ರ ಸರಕಾರದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆಯೋಗ ನಡೆಸುವ ವಿವಿಧ ಹಂತದ ಪರೀಕ್ಷೆಗಳಲ್ಲಿ ಯಾವುದೇ ತೆರನಾದ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ನಿಗಾ ಇಡುವುದರ ಜತೆಯಲ್ಲಿ ಇಂತಹ ಯಾವುದೇ ಪ್ರಕರಣ ದಾಖಲಾದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳುವುದೇ ಅಲ್ಲದೆ ಕಾನೂನು ಕ್ರಮ ಜರಗಿಸುವುದಾಗಿ ಎಚ್ಚರಿಕೆ ನೀಡಿದೆ.

ಆಯೋಗ ನಡೆಸುವ ಪರೀಕ್ಷೆಗಳಿಗಾಗಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದರಿಂದ ಹಿಡಿದು ಮೌಲ್ಯಮಾಪನ ನಡೆಸಿ ಫ‌ಲಿತಾಂಶ ಘೋಷಣೆಯಾಗುವವರೆಗಿನ ಇಡೀ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಅಕ್ರಮ, ಸೋರಿಕೆ, ದುರುಪಯೋಗ, ಮಧ್ಯವರ್ತಿಗಳ ಹಾವಳಿ ಸಹಿತ ಎಲ್ಲ ತೆರನಾದ ಅಕ್ರಮಗಳನ್ನು ಗಂಭೀರ ದುರ್ನಡತೆ ಎಂದು ಪರಿಗಣಿಸಿ, ಅಂತಹ ಪರೀಕ್ಷಾರ್ಥಿಗಳನ್ನು ಡಿಬಾರ್‌ ಅಥವಾ ಅನರ್ಹಗೊಳಿ­ಸುವ ಜತೆಯಲ್ಲಿ ಅವರ ವಿರುದ್ಧ ಮತ್ತು ಆ ಪ್ರಕರಣದಲ್ಲಿ ಶಾಮೀಲಾದವರೆಲ್ಲರ ವಿರುದ್ಧ ಕಾನೂನು ಕ್ರಮ ಜರಗಿಸಲು ನಿರ್ಧರಿಸಿದೆ.

ಇನ್ನು ಆಯೋಗ ನಡೆಸುವ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣಗಳನ್ನು ದುರುಪ­ಯೋಗ ಪಡಿಸಿಕೊಳ್ಳುವವರ ಮೇಲೂ ಕಟ್ಟುನಿಟ್ಟಿನ ನಿಗಾ ಇರಿಸಿ, ಅಂತಹ ಕೃತ್ಯಗಳಲ್ಲಿ ಶಾಮೀಲಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

Advertisement

ಎಸ್‌ಎಸ್‌ಸಿ ಮತ್ತು ವಿವಿಧ ರಾಜ್ಯಗಳಲ್ಲಿನ ನೇಮಕಾತಿ ಸಂಸ್ಥೆಗಳು ನಡೆಸುವ ನೇಮಕಾತಿ ಪರೀಕ್ಷೆ ಸಂದರ್ಭಗಳಲ್ಲಿ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೈಜ ಪರೀಕ್ಷಾರ್ಥಿಗಳ ಗುರುತು ಪತ್ತೆಗಾಗಿ ಆಧಾರ್‌ ಆಧಾರಿತ ದೃಢೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆಯೋಗ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರಕಾರ ತನ್ನ ಒಪ್ಪಿಗೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಆಯೋಗ, ತನ್ನೆಲ್ಲ ನೇಮಕಾತಿ ಪರೀಕ್ಷೆ ವೇಳೆ ಅಭ್ಯರ್ಥಿಗಳ ದೃಢೀಕರಣಕ್ಕೆ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಇದರಿಂದ ನಕಲಿ ಅಭ್ಯರ್ಥಿಗಳ ಹಾವಳಿಗೆ ಬಹುತೇಕ ಕಡಿವಾಣ ಬೀಳಲಿದೆ.

ಒಟ್ಟಿನಲ್ಲಿ ನೇಮಕಾತಿ ಪರೀಕ್ಷಾ ಪ್ರಕ್ರಿಯೆಯಲ್ಲಿನ ಎಲ್ಲ ತೆರನಾದ ಅಕ್ರಮಗಳಿಗೆ ಕಡಿವಾಣ ಹಾಕುವ ಮೂಲಕ ಅರ್ಹ, ಪ್ರತಿಭಾವಂತರಿಗೆ ಸರಕಾರಿ ಉದ್ಯೋಗ ಲಭಿಸುವಂತಾಗಲು ಎಸ್‌ಎಸ್‌ಸಿ ದಿಟ್ಟ ಹೆಜ್ಜೆ ಇರಿಸಿದೆ. ದೇಶಾದ್ಯಂತ ಪರೀಕ್ಷಾ ಅಕ್ರಮಗಳ ಬಗೆಗಿನ ಚರ್ಚೆಗಳು ತೀವ್ರಗೊಂಡಿರುವಂತೆಯೇ ಎಸ್‌ಎಸ್‌ಸಿ ಇಂತಹ ಅಕ್ರಮಗಳಲ್ಲಿ ತೊಡಗಿಕೊಂಡಿರುವ ದಂಧೆಕೋರರು, ಕಿಡಿಗೇಡಿಗಳಿಗೆ ಕಾನೂನಿನ ಭಯವನ್ನು ಮೂಡಿಸುವುದರ ಜತೆಯಲ್ಲಿ ನೇಮಕಾತಿ ಪರೀಕ್ಷೆಯನ್ನು ನಿರಾಳರಾಗಿ ಎದುರಿಸಲು ಪರೀಕ್ಷಾರ್ಥಿಗಳಿಗೆ ಧೈರ್ಯ ತುಂಬಿದೆ. ನೇಮಕಾತಿ ಪರೀಕ್ಷೆಗಳು ಸುಲಲಿತ ಮತ್ತು ಸರಾಗವಾಗಿ ನಡೆದು, ಪ್ರತಿಭಾವಂತರಿಗೆ ಸರಕಾರಿ ಉದ್ಯೋಗ ಲಭಿಸಿದರೆ ಸಹಜವಾಗಿಯೇ ಎಸ್‌ಎಸ್‌ಸಿ ಮೇಲಣ ದೇಶವಾಸಿಗಳ ವಿಶ್ವಾಸಾರ್ಹತೆ ಹೆಚ್ಚಲಿದೆ.

Advertisement

Udayavani is now on Telegram. Click here to join our channel and stay updated with the latest news.

Next