Advertisement
ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ವಿವಿಧ ಪರೀಕ್ಷೆಗಳು ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮಗಳು ನಡೆಯುತ್ತಿರುವ ಪ್ರಕರಣಗಳು ಪದೇಪದೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಸಿ ಎಲ್ಲ ತೆರನಾದ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.
Related Articles
Advertisement
ಎಸ್‌ಎಸ್‌ಸಿ ಮತ್ತು ವಿವಿಧ ರಾಜ್ಯಗಳಲ್ಲಿನ ನೇಮಕಾತಿ ಸಂಸ್ಥೆಗಳು ನಡೆಸುವ ನೇಮಕಾತಿ ಪರೀಕ್ಷೆ ಸಂದರ್ಭಗಳಲ್ಲಿ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೈಜ ಪರೀಕ್ಷಾರ್ಥಿಗಳ ಗುರುತು ಪತ್ತೆಗಾಗಿ ಆಧಾರ್ ಆಧಾರಿತ ದೃಢೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆಯೋಗ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರಕಾರ ತನ್ನ ಒಪ್ಪಿಗೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಆಯೋಗ, ತನ್ನೆಲ್ಲ ನೇಮಕಾತಿ ಪರೀಕ್ಷೆ ವೇಳೆ ಅಭ್ಯರ್ಥಿಗಳ ದೃಢೀಕರಣಕ್ಕೆ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಇದರಿಂದ ನಕಲಿ ಅಭ್ಯರ್ಥಿಗಳ ಹಾವಳಿಗೆ ಬಹುತೇಕ ಕಡಿವಾಣ ಬೀಳಲಿದೆ.
ಒಟ್ಟಿನಲ್ಲಿ ನೇಮಕಾತಿ ಪರೀಕ್ಷಾ ಪ್ರಕ್ರಿಯೆಯಲ್ಲಿನ ಎಲ್ಲ ತೆರನಾದ ಅಕ್ರಮಗಳಿಗೆ ಕಡಿವಾಣ ಹಾಕುವ ಮೂಲಕ ಅರ್ಹ, ಪ್ರತಿಭಾವಂತರಿಗೆ ಸರಕಾರಿ ಉದ್ಯೋಗ ಲಭಿಸುವಂತಾಗಲು ಎಸ್‌ಎಸ್‌ಸಿ ದಿಟ್ಟ ಹೆಜ್ಜೆ ಇರಿಸಿದೆ. ದೇಶಾದ್ಯಂತ ಪರೀಕ್ಷಾ ಅಕ್ರಮಗಳ ಬಗೆಗಿನ ಚರ್ಚೆಗಳು ತೀವ್ರಗೊಂಡಿರುವಂತೆಯೇ ಎಸ್‌ಎಸ್‌ಸಿ ಇಂತಹ ಅಕ್ರಮಗಳಲ್ಲಿ ತೊಡಗಿಕೊಂಡಿರುವ ದಂಧೆಕೋರರು, ಕಿಡಿಗೇಡಿಗಳಿಗೆ ಕಾನೂನಿನ ಭಯವನ್ನು ಮೂಡಿಸುವುದರ ಜತೆಯಲ್ಲಿ ನೇಮಕಾತಿ ಪರೀಕ್ಷೆಯನ್ನು ನಿರಾಳರಾಗಿ ಎದುರಿಸಲು ಪರೀಕ್ಷಾರ್ಥಿಗಳಿಗೆ ಧೈರ್ಯ ತುಂಬಿದೆ. ನೇಮಕಾತಿ ಪರೀಕ್ಷೆಗಳು ಸುಲಲಿತ ಮತ್ತು ಸರಾಗವಾಗಿ ನಡೆದು, ಪ್ರತಿಭಾವಂತರಿಗೆ ಸರಕಾರಿ ಉದ್ಯೋಗ ಲಭಿಸಿದರೆ ಸಹಜವಾಗಿಯೇ ಎಸ್‌ಎಸ್‌ಸಿ ಮೇಲಣ ದೇಶವಾಸಿಗಳ ವಿಶ್ವಾಸಾರ್ಹತೆ ಹೆಚ್ಚಲಿದೆ.