Advertisement
ರಾಮಾಯಣ ಕಾವ್ಯಕ್ಕೆ ಶ್ರೀರಾಮನೇ ಕಥಾ ನಾಯಕ; ರಸನಾಯಕ. ರಾಮ ಚರಿತ್ರೆಯನ್ನು ಇತಿಹಾಸವಾಗಿ ಭಾವಿಸುವವರಿಗೆ ಅದು ನಮ್ಮ ದೇಶದ ಅತ್ಯಂತ ಮಹತ್ವ ಪೂರ್ಣವಾದ ಐತಿಹಾಸಿಕ ಘಟನೆ. ವಸ್ತುವೊಂದೇ, ಭಾವಿಸುವ ವಿಧಾನಗಳು ಭಿನ್ನವಷ್ಟೇ. ರಾಮನನ್ನು ಕೇವಲ ಭಾರತೀಯ ಎಂದು ಭಾವಿಸಿದರೆ ವಿಶಾಲವಾದ ವಸ್ತುವನ್ನು ಕಿಟಕಿಯಿಂದ ನೋಡಿದ ಅಪಚಾರವೇ ಸರಿ. ರಾಮ ಭಾರತೀಯ ಅಲ್ಲ ಅಂತಲ್ಲ. ಭಾರತೀಯನಾಗಿದ್ದುಕೊಂಡೇ ವಿಶ್ವವ್ಯಾಪಕ.
Related Articles
Advertisement
ರಾಮನ ಬದುಕಿನ ಪಾಠ: ಸಮಾಜ ಬೆಳೆದಂತೆ ಪ್ರತ್ಯೇಕ ವ್ಯಕ್ತಿಗಳ ವರ್ತನೆಯೂ ಸಂಕೀರ್ಣವಾಗುತ್ತಲೇ ಬರುತ್ತಿದೆ. ಮನೆಯಲ್ಲಿ ಹೇಗಿರಬೇಕು, ಮನೆಯವರ ಜೊತೆಗೆ ಹೇಗೆ ವರ್ತಿಸಬೇಕು, ಬೀದಿಗೆ ಬಂದಾಗ ಹೇಗಿರಬೇಕು, ಅಕ್ಕ ಪಕ್ಕದವರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಪ್ರಶ್ನೆಗಳು ಗ್ರಾಮಗಳಲ್ಲಿಯೂ, ನಗರಗಳಲ್ಲಿಯೂ ಸಮಾನವೇ. ದಿನ ಬೆಳಗಾದರೆ ಒಂದಲ್ಲ ಒಂದು ಇಕ್ಕಟ್ಟು- ಬಿಕ್ಕಟ್ಟುಗಳು ಒದಗುತ್ತಲೇ ಇರುತ್ತವೆ. ಅವುಗಳನ್ನು ನಿರ್ವಹಿಸಲು ತಾಳ್ಮೆ ಬೇಕು, ಜಾಣತನ ಬೇಕು, ಯೋಗಕ್ಷೇಮದ ಮುಂಧೋರಣೆ ಬೇಕು. ಇಂಥ ಕ್ಲಿಷ್ಟ ಸಂದರ್ಭಗಳನ್ನು ದಾಟುವ ಕ್ರಮಗಳನ್ನು ರಾಮನ ಬದುಕು ಹೇಳಿಕೊಡುತ್ತದೆ. ಇಂದು ನಮ್ಮ ಮಕ್ಕಳೆಲ್ಲರೂ ಶ್ರೀರಾಮಚಂದ್ರನಂತೇ ಆಗಬೇಕು! ಇದು ನಮ್ಮ ಕನಸು. ಆದರೆ, ಅಂಥ ಲಕ್ಷ ಲಕ್ಷ ಮಕ್ಕಳಲ್ಲಿ ಒಬ್ಬ ರಾಮಚಂದ್ರ ನಿರ್ಮಾಣ ಆದರೂ ನಮ್ಮ ಭಾಗ್ಯಕ್ಕೆ ಸರಿದೊರೆಯಿಲ್ಲ.
ಆದರ್ಶ ರಾಮ…: ರಾಮನ ಪ್ರೀತಿಗೆ ಜಾತಿಯ ಮಿತಿಯಿಲ್ಲ. ವಯಸ್ಸಿನ ಗಡಿಯಿಲ್ಲ. ಪ್ರದೇಶದ ಅರುಚಿಯಿಲ್ಲ. ಜನಾಂಗದ ವೈಷಮ್ಯವಿಲ್ಲ. ಶಬರಿಯ ಬೋರೆಯ ಎಂಜಲು ರಾಮನಿಗೆ ಹೃದ್ಯವಾಗಿತ್ತು. ಜಟಾಯುವಿನ ಸ್ನೇಹ ರಾಮನಿಗೆ ಪಥ್ಯವಾಗಿತ್ತು. ಆಂಜನೇಯನ ಕಾಯಕ ರಾಮನಿಗೆ ಅಭೀಷ್ಟವಾಗಿತ್ತು. ಸುಗ್ರೀವನ ಸಖ್ಯ ರಾಮನಿಗೆ ಅಕ್ಕರೆಯ ಸಂಗತಿಯಾಗಿತ್ತು. ರಾಮ ಎಲ್ಲರನ್ನೂ ಒಪ್ಪಿದ, ರಾಮ ಅಪ್ಪಿದ. ತಾನು ಸರ್ವಭೂತ ಹಿತೈಶಿ ಎಂಬ ಆದರ್ಶ ವನ್ನು ತೆರೆದು ಕಾಣಿಸಿದ. ಮಹಾಕವಿ ಯ ವಿಶ್ವ ಮಾನವ ಕಲ್ಪನೆ ರಾಮನ ಪಾತ್ರತ್ವ ದಾಟುವುದಿಲ್ಲ. ಅದು ರಾಮ ಪಾಕ ಪಡೆದು ವಿಶ್ವವೇ ಒಪ್ಪಿಕೊಳ್ಳುವ ಸಂಸ್ಕಾರದ ಸಂಗತಿಯಾಗಿದೆ.
ಇಂದು ಮಕ್ಕಳಿಗೆ ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತೇವೆ. ಅವರ ಬೇಕು- ಬೇಡಗಳನ್ನು ಪ್ರೀತಿಯಿಂದ ಒದಗಿಸುತ್ತೇವೆ. ಅವರಿಗೆ ಸುರಕ್ಷಿತ ನಾಗರೀಕ ಜೀವನವನ್ನು ಕಲ್ಪಿಸಿ ಕೊಡುತ್ತಿದ್ದೇವೆ. ಆದರೆ ಮಕ್ಕಳು, ತಂದೆ- ತಾಯಿಯನ್ನು ಗೌರವಿಸುವುದು ಕಡಿಮೆಯಾಗುತ್ತಿದೆ. ಬಲಿತಂತೆ ಮನೆಯನ್ನು ಮರೆಯುತ್ತಿದ್ದಾರೆ. ತಂದೆ- ತಾಯಿಗಳು ಮನೆ, ಮಾತೃಭಾಷೆ, ಮನೆಯ ನಡವಳಿಕೆಗಳನ್ನು ಮರೆಯುವುದಲ್ಲದೇ ತಿರಸ್ಕಾರದಿಂದಲೂ ಅವರು ನೋಡುವಂತಾಗಿದೆ. ಹಳ್ಳಿಗಳಲ್ಲಿ ಮನೆಗಳು ವೃದ್ಧಾಶ್ರಮ ಆಗತೊಡಗಿವೆ. ನಗರಗಳಲ್ಲಿ ತಂದೆ- ತಾಯಿಗಳಿಂದ ಬೇರ್ಪಟ್ಟು ಮಕ್ಕಳು ಮೇಲು ಮೇಲಿನ ಮಹಡಿಗಳನ್ನು ಹತ್ತಿಕೊಳ್ಳುತ್ತಿದ್ದಾರೆ.
ಅಂದು ಶ್ರೀರಾಮ ಹಾಗೆ ಮಾಡಿದ್ದನೇ? ಇಲ್ಲ! ರಾಮ, ನಾಡನ್ನು ಬಿಟ್ಟು ಕಾಡಿಗೆ ಬಂದ. ಮೊದಲ ಸಲ ಕಾಡಿನವರೇ ಬಂದು ರಾಮನನ್ನು ಅರಣ್ಯಕ್ಕೆ ಕರೆದೊಯ್ದರು. ಎರಡನೇ ಸಲ ಅವನೇ ನಾಡಿಗೆ ಬೇಡವಾಗಿ ಕಾಡಿಗೆ ನಡೆದ. ರಾಮ, ಕಾಡಿಗೆ ಹೋದರೂ ಕಾಡಾಡಿಯಾಗಲಿಲ್ಲ. ಕಾಡು ಅವನನ್ನು ಕಾಡಿರಬಹುದು. ಆದರೆ, ತನ್ನ ಅನುಪಮವಾದ ಗುಣ, ಶೀಲ ವರ್ತನೆಗಳಿಂದ ಕಾಡನ್ನು ವಿದ್ಯೆಗಳ ತವರಾಗಿಸಿಕೊಂಡ. ನಾಡನ್ನು ನಲ್ಮೆಯ ಬೀಡಾಗಿಸಿದ. ರಾಮನ ಪಿತೃವಾಕ್ಯ ಪರಿಪಾಲನೆ ಇಂದಿನ ವಿಶ್ವದ ಮಕ್ಕಳಿಗೆ ಆದರ್ಶವಾಗಬಾರದೇ? ರಾಮನಂಥ ಒಬ್ಬ ಮಗು ಒಂದು ಊರಲ್ಲಿದ್ದರೆ ವಿಶ್ವದ ಅಸಂಖ್ಯ ವೃದ್ಧಾಶ್ರಮಗಳಲ್ಲಿ ಕೊರಗುತ್ತ, ಕಣ್ಣೀರು ಸುರಿಸುತ್ತಾ ಸಾವಿಗಾಗಿ ಕಾಯುತ್ತಿರುವ ವೃದ್ಧರ ಸಂಖ್ಯೆ ಕಡಿಮೆ ಆಗಲಾರದೇ?(ಲೇಖಕರು ಪ್ರಸಿದ್ಧ ತಾಳಮದ್ದಲೆ ಅರ್ಥಧಾರಿಗಳು) * ವಿ. ಉಮಾಕಾಂತ ಭಟ್ಟ ಕೆರೇಕೈ
ನಿರೂಪಣೆ: ರಾಘವೇಂದ್ರ ಬೆಟ್ಟಕೊಪ್ಪ