Advertisement

ಶ್ರೀನಿವಾಸ ಪ್ರಸಾದ್‌, ವಿಶ್ವನಾಥ್‌ ಭೇಟಿ: ಕುತೂಹಲ ಮೂಡಿಸಿದ ನಡೆ

11:41 PM Jun 14, 2019 | Lakshmi GovindaRaj |

ಬೆಂಗಳೂರು: ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್‌.ವಿಶ್ವನಾಥ್‌ ಅವರು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

Advertisement

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎಚ್‌.ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವಾದರೂ ಇಬ್ಬರು ಪಕ್ಷೇತರರು ಮಾತ್ರ ಸಂಪುಟ ಸೇರ್ಪಡೆಯಾದ ಬೆನ್ನಲ್ಲೇ ಭೇಟಿಯಾಗಿರುವುದರಿಂದ ಎಚ್‌.ವಿಶ್ವನಾಥ್‌ ಬಿಜೆಪಿ ಸೇರಲಿದ್ದಾರೆಂಬ ಗುಸು ಗುಸು ಕೇಳಿಬರುತ್ತಿದೆ.

ವಿಶ್ವನಾಥ್‌ ಹಾಗೂ ಶ್ರೀನಿವಾಸ ಪ್ರಸಾದ್‌ ಅವರ ಭೇಟಿ ಸಂದರ್ಭದಲ್ಲಿ ಮಾಜಿ ಸಚಿವ ಯೋಗೇಶ್ವರ್‌ ಉಪಸ್ಥಿತರಿದ್ದರು ಎಂದು ಹೇಳಲಾಗಿದೆ. ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌, “ಶ್ರೀನಿವಾಸಪ್ರಸಾದ್‌ ಹಾಗೂ ನಾನು ದಶಕಗಳ ಸ್ನೇಹಿತರು.

ಆಗ್ಗಾಗೆ ಭೇಟಿ ಮಾಡುತ್ತಿರುತ್ತೇವೆ. ಅದರಲ್ಲಿ ವಿಶೇಷವೇನಿಲ್ಲ. ನಾನು ಬಿಜೆಪಿಗೆ ಹೋಗುವುದಾದರೆ ಹೇಳಿಯೇ ಹೋಗುತ್ತೇನೆ. ಆದರೆ, ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ. ನಾನು ಜೆಡಿಎಸ್‌ ಶಾಸಕ’ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ರಾಜೀನಾಮೆ ಮುಗಿದ ಅಧ್ಯಾಯ. ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ನನ್ನ ರಾಜೀನಾಮೆ ಅಂಗೀಕರಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

Advertisement

ಈಗಲೇ ಹೇಳಲಾಗದು: ವಿಶ್ವನಾಥ್‌ ಕಾಂಗ್ರೆಸ್‌ನಲ್ಲಿದ್ದವರು, ಸಿದ್ದರಾಮಯ್ಯರಿಂದ ಅವರಿಗೆ ತೊಂದರೆಯಾಯಿತು. ಹೀಗಾಗಿ, ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ಗೆ ಸೇರಿದ್ದರು. ನಾನೂ ಸೋಲಲು ಸಿದ್ದರಾಮಯ್ಯ ಕಾರಣರಾಗಿದ್ದರು. ವಿಶ್ವನಾಥ್‌ ಬಿಜೆಪಿಗೆ ಬರುತ್ತಾರೆಂದು ಈಗಲೇ ಏನೂ ಹೇಳಲಾಗದು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ಹೇಳಿದರು.

ನಾವು ಆ ಬಗ್ಗೆ ಚರ್ಚೆ ಮಾಡಿಲ್ಲ. ಪಕ್ಷದಲ್ಲಿ ಸಾಕಷ್ಟು ಹಿರಿಯರಿದ್ದು ಅವರೆಲ್ಲಾ ಏನು ತೀರ್ಮಾನ ಕೈಗೊಳ್ಳುತ್ತಾರೋ ನೋಡಬೇಕು. ಮೈತ್ರಿ ಸರ್ಕಾರ ಇರುತ್ತೋ ಇಲ್ಲವೋ ಅಂತ ನಾನು ಊಹೆ ಮಾಡಿ ಹೇಳ್ಳೋಕಾಗಲ್ಲ, ಯೋಗೇಶ್ವರ್‌ ಕೂಡ ಮೈತ್ರಿ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬರಲು ಪ್ರಯತ್ನ ಪಡುತ್ತಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಆಂತರಿಕ ಕಲಹದಿಂದ ಸರ್ಕಾರ ಬಿದ್ದರೆ ಬಿಜೆಪಿ ಕೈ ಕಟ್ಟಿ ಕೂರಲ್ಲ. ಸರ್ಕಾರವೇ ಅತಂತ್ರವಾಗಿರುವಾಗ ಮುಖ್ಯಮಂತ್ರಿ ಗ್ರಾಮವಾಸ್ತವ್ಯಕ್ಕೆ ಹೋದರೆ ಏನು ಪ್ರಯೋಜನ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next