ಹಾನಗಲ್ಲ: ಜನರ ಬಳಿಗೆ ಆಡಳಿತ ಕೊಂಡೊಯ್ಯುವ ಉದ್ದೇಶದಿಂದ ಶಾಸಕ ಶ್ರೀನಿವಾಸ್ ಮಾನೆ ಅವರು ಶಾಸಕರ ನಡಿಗೆ ಹಳ್ಳಿಗಳ ಕಡೆಗೆ ವಿನೂತನ ಕಾರ್ಯಕ್ರಮ ಆರಂಭಿಸಿದ್ದು, ಮೊದಲ ಕಾರ್ಯಕ್ರಮ ಮಂಗಳವಾರ ತಾಲೂಕಿನ ಹಳ್ಳಿಬೈಲ್ ಗ್ರಾಮದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹತ್ತು ಹಲವು ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಕುರಿತು ಗಮನ ಸೆಳೆದರು. ಸರಕಾರಿ ಪ್ರಾಥಮಿಕ ಶಾಲೆ ಆವರಣ ಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದು, ಮೈದಾನ ಸಮತಟ್ಟುಗೊಳಿಸುವುದು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಗ್ರಾಮಸ್ಥರು ಹೇಳಿಕೊಂಡರು.
ಸಮಸ್ಯೆ ಆಲಿಸಿ, ಸೂಕ್ತ ಕ್ರಮಕ್ಕೆ ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳಿಗೆ ಶ್ರೀನಿವಾಸ್ ಮಾನೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್ ಮಾನೆ, ಹಳ್ಳಿಗಳ ಕಡೆಗೆ ಎನ್ನುವ ವಿನೂತನ ಪ್ರಯೋಗ ಆರಂಭಿಸಿದ್ದೇನೆ. ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೂ ಸ್ಥಳೀಯ ಹಂತದ ಅಧಿಕಾರಿಗಳೊಂದಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸುವುದು ಇದರ ಮೂಲ ಉದ್ದೇಶವಾಗಿದೆ.
ಈಗಾಗಲೇ ಕಾರ್ಯಸ್ಥಳದ ಕಚೇರಿಯಲ್ಲಿ ನಿತ್ಯ ಬೆಳಗ್ಗೆ 2 ಗಂಟೆ ಲಭ್ಯವಿದ್ದು, ಜನರ ಕೆಲಸ ಮಾಡಿಕೊಡುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳೂ ಕೂಡ ಕಾರ್ಯಸ್ಥಳದಲ್ಲಿ ಬೆಳಗ್ಗೆ ಒಂದು ಗಂಟೆ ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದರು. ಆಡಳಿತದಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದ್ದೇನೆ. ಅಧಿಕಾರಿಗಳು ಸಾರ್ವಜನಿಕರ ಸಂಪರ್ಕಕ್ಕೆ ಲಭ್ಯ ಇದ್ದರೆ ಬಹುತೇಕ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಹುಡುಕಿಕೊಂಡು ಜನ ತಾಲೂಕು, ಹೋಬಳಿ ಕೇಂದ್ರಗಳಿಗೆ ಅಲೆದಾಡಬಾರದು. ಇದರಿಂದ ಹಣ, ಸಮಯ ಎರಡೂ ವ್ಯಯವಾಗಲಿದ್ದು, ಮೊದಲೇ ಜನ ಆರ್ಥಿಕ ಸಮಸ್ಯೆಗೆ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ಹಳ್ಳಿ ವ್ಯಾಪ್ತಿಯಲ್ಲೇ ಸಮಸ್ಯೆಗೆ ಪರಿಹಾರ ದೊರಕಿಸಲು ಕಾಳಜಿ ವಹಿಸಲಾಗಿದೆ ಎಂದು ಶ್ರೀನಿವಾಸ್ ಮಾನೆ ಹೇಳಿದರು.
ಇದಕ್ಕೂ ಮೊದಲು ಗ್ರಾಮದ ಶಿವಲಿಂಗೇಶ್ವರ ಮಠಕ್ಕೆ ಭೇಟಿ ದರ್ಶನ ಪಡೆದ ಶ್ರೀನಿವಾಸ್ ಮಾನೆ ಆದರ್ಶ ಗ್ರಾಮದ ಯೋಜನೆಯಡಿಯ ಕಾಮಗಾರಿ ವೀಕ್ಷಿಸಿದರು. ಬಳಿಕ ಪಕ್ಕಾ ಗಟಾರ್
ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿದರು. ಹಾನಗಲ್ ಪುರಸಭೆ ಸದಸ್ಯ ಅನಂತವಿಕಾಸ್ ನಿಂಗೋಜಿ, ನಿರಂಜನ ಪಾಟೀಲ, ಯಲ್ಲಪ್ಪ ಕಲ್ಲೇರ, ಮಂಜವ್ವ ಹೊಳೆಣ್ಣನವರ, ಮಾರುತಿ ಮೂಕನವರ, ಮಮತಾ ಕುರುಬರ, ಈರನಗೌಡ ಹೊಸಮನಿ, ಗದಿಗೆಪ್ಪಗೌಡ ಹೊಸಮನಿ, ಕರಬಸಗೌಡ ಮೂಲಿಮನಿ, ಶಿವಪ್ಪ ಹೊಳೆಣ್ಣನವರ, ಶಿವಪ್ಪ ಬಡಿಗೇರ, ಬಸವಣ್ಣೆಪ್ಪ
ಹೊಳೆಣ್ಣನವರ, ಮೇಘರಾಜ್ ಗುಡ್ಡೇರ, ರಾಮಣ್ಣ ಶೇಷಗಿರಿ, ಫಯಾಜ್‌ಅಹ್ಮದ್ ಲೋಹಾರ ಮೊದಲಾದವರು ಈ ಸಂದರ್ಭದಲ್ಲಿದ್ದರು.