Advertisement

ಮನಸೂರೆಗೊಂಡ ನೃತ್ಯ ಪ್ರವಚನ ಶ್ರೀನಿವಾಸ ಕಲ್ಯಾಣ 

06:00 AM Nov 09, 2018 | |

ವಿಜಯ ದಶಮಿಯಂದು ರಾಜಾಂಗಣದಲ್ಲಿ ನೃತ್ಯ ನಿಕೇತನ ಕೊಡವೂರು ನೃತ್ಯ ಪ್ರವಚನವಾಗಿ ಪ್ರಸ್ತುತಪಡಿಸಿದ ಶ್ರೀನಿವಾಸ-ಪದ್ಮಾವತಿ ಕಲ್ಯಾಣ ಒಂದು ಹೊಸ ಅನುಭವವನ್ನು ನೀಡಿತು. ವಿದ್ವಾನ್‌ ಗೋಪಾಲಾಚಾರ್ಯರು ಮಾಡಿದ ವೈಕುಂಠ ವರ್ಣನೆ, ಭೃಗು ಋಷಿ ಶಾಪ, ಮುಂತಾದ ಕಥಾನಕವನ್ನು ಕಲಾವಿದರು ಪ್ರಾರಂಭದಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸಿ ದರು. ಬ್ರಹ್ಮ-ರುದ್ರಾದಿಗಳು ಹಸುವಿನ ರೂಪಧಾರಣೆ ಮಾಡುವುದು, ಶ್ರೀನಿವಾಸ ದೇವರು ಚೋಳರಾಜ ನನ್ನು ಶಪಿಸುವುದು, ಬೇಟೆಯಾಡುವಾಗ ಶ್ರೀನಿವಾಸ ರಾಜಕುಮಾರಿ ಪದ್ಮಾವತಿಯನ್ನು ಭೇಟಿಯಾಗುವುದು ಈ ಸನ್ನಿವೇಶಗಳನ್ನು ಪ್ರವಚನದ ಆಶಯಕ್ಕೆ ಚ್ಯುತಿಬಾರದಂತೆ  ಕಲಾವಿದೆ ಯರು ಅಭಿನಯಿಸಿದರು. ಶ್ರೀನಿವಾಸನು ಕೊರವಂಜಿ ವೇಷದಲ್ಲಿ ಪದ್ಮಾವತಿಯಲ್ಲಿಗೆ ತೆರಳಿ ಆಕೆಯ  ಮನೋಗತವನ್ನು ತಿಳಿದುಕೊಳ್ಳುವ ಪ್ರಯತ್ನ ಪ್ರವಚನದಲ್ಲಿ ಮೂಡಿಬಂದರೂ ನೃತ್ಯಭಾಗದಲ್ಲಿ ಕಂಡುಬರಲಿಲ್ಲ. ಶ್ರೀನಿವಾಸ-ಪದ್ಮಾವತಿ ಕಲ್ಯಾಣದ ಕೊಡುಗೆ ಕೊರವಂಜಿ ನೃತ್ಯವನ್ನು ಅಳವಡಿಸಿಕೊಂಡಿದ್ದರೆ ನೃತ್ಯ ನಾಟಕ ಇನ್ನಷ್ಟು ರಂಜನೀಯವಾಗುತ್ತಿತ್ತು. 

Advertisement

ಮುಂದೆ ಬಕುಳಾದೇವಿಯಿಂದ ಆಕಾಶ ರಾಜನಲ್ಲಿ ಶ್ರೀನಿವಾಸ-ಪದ್ಮಾವತಿಯರ ವಿವಾಹ ಪ್ರಸ್ತಾಪ, ಬೃಹಸ್ಪತಿ ಹಾಗೂ ಶುಕ್ರಾಚಾರ್ಯರಿಂದ ವಿವಾಹ ಮುಹೂರ್ತ ನಿಗದಿ, ಕುಬೇರನಿಂದ ಹಣಕಾಸಿನ ವ್ಯವಸ್ಥೆ, ಬ್ರಹ್ಮಾದಿ ದೇವತೆಗಳ ಆಗಮನ, ಶಮೀ ವೃಕ್ಷಕ್ಕೆ ಪೂಜೆ, ನರಸಿಂಹ ದೇವರಿಗೆ ನೈವೇದ್ಯ ಸಮರ್ಪಣೆ ಪ್ರವಚನದಲ್ಲಿ ಕೇಳಿ ಬಂದಿತಾದರೂ ಕೆಲವೊಂದು ಸನ್ನಿವೇಶಗಳನ್ನು ನೃತ್ಯ ನಾಟಕದಲ್ಲಿ ಅಳವಡಿಸಿಕೊಳ್ಳಲಾಗದಿದ್ದದ್ದು ಕೊರತೆಯೆನಿಸಲಿಲ್ಲ. ಮುಂದೆ ಶುಭ ಮುಹೂರ್ತದಲ್ಲಿ ಲಕ್ಷ್ಮೀದೇವಿ, ಬ್ರಹ್ಮರುದ್ರಾದಿ ದೇವತೆಗಳು, ಮುನಿಗಡಣ, ಬಕುಳಾದೇವಿ ಉಪಸ್ಥಿತಿಯಲ್ಲಿ ಶ್ರೀನಿವಾಸ-ಪದ್ಮಾವತಿಯರ ಕಲ್ಯಾಣ ನಡೆದೇ ಹೋಯಿತು. ವಧು-ವರರಿಗೆ ಎಣ್ಣೆ ಸ್ನಾನ, ಮದುವೆ ದಿಬ್ಬಣ ಬರಮಾಡಿಕೊಳ್ಳುವುದು, ವಧುವನ್ನು ಸಿಂಗರಿಸಿ ಮೇನೆಯಲ್ಲಿ ಕರೆತರುವುದು, ಅತಿಥಿಗಳಿಗೆ ಆದರೋಪಚಾರ ಮುಂತಾದ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಯಥಾವತ್‌ ರಂಗಕ್ರಿಯೆಗೆ ಪರಿವರ್ತಿಸಿದ ನಿರ್ದೇಶಕರ ಪರಿಕಲ್ಪನೆ ಮೆಚ್ಚುವಂಥಾದ್ದು. 

ನಾಟಕದಲ್ಲಿರುವಂತೆ ಪರದೆಗಳ ಉಪಯೋಗ ಅಥವಾ ಬೆಳಕಿನ ಕಣ್ಣಮುಚ್ಚಾಲೆಯಾಟವನ್ನು ನೃತ್ಯ ನಾಟಕದಲ್ಲಿ ಅಳವಡಿಸುವುದು ಕಷ್ಟಸಾಧ್ಯವಾದರೂ ನಿರ್ದೇಶಕರು ಸಮೂಹ ಕಲಾವಿದರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಈ ಕೊರತೆಯನ್ನು ನೀಗಿಸಿಕೊಂಡರು. ಪ್ರವಚನ ಪಾಂಡಿತ್ಯ ಪೂರ್ಣವಾಗಿದ್ದರೂ ತುಸು ದೀರ್ಘ‌ವೆನಿಸಿ ರಸಾಭಾಸವಾದಂತಾಯ್ತು. ನೃತ್ಯಕ್ಕೆ ಬಳಸಿದ ಹಾಡುಗಳ ಸಾಹಿತ್ಯ ಕನ್ನಡದಲ್ಲಿದ್ದುದರಿಂದ ಪ್ರವಚನದ ಆಗತ್ಯ ಕಂಡು ಬರಲಿಲ್ಲ. ಆದರಲ್ಲೂ ತಮ್ಮ ಸುಶ್ರಾವ್ಯ ಕಂಠದಿಂದ ದಾಸರಪದಗಳನ್ನು ಹಾಗೂ ನೃತ್ಯಭಾಗದ ಹಾಡುಗಳನ್ನು ಹಾಡಿದ ಸಂಗೀತಾ ಬಾಲಚಂದ್ರ ಅಭಿನಂದನಾರ್ಹರು. ಸೂಕ್ತ ಬೆಳಕಿನ ವ್ಯವಸ್ಥೆಯೂ ಪ್ರದರ್ಶನಕ್ಕೆ ಧನಾತ್ಮಕ ಕೊಡುಗೆ ನೀಡಿತು. ಹಿಮ್ಮೇಳದಲ್ಲಿ ಬಾಲಚಂದ್ರ ಭಾಗವತ್‌(ಮೃದಂಗ), ಶ್ರೀಧರ ಆಚಾರ್‌(ವಯಲಿನ್‌), ಮುರಳೀಧರ(ಕೊಳಲು), ಚಂದ್ರಶೇಖರರಾವ್‌(ತಬಲ) ಪೂರಕವಾಗಿ ಸಹಕರಿಸಿದರು. ಪ್ರವಚನ ಹಾಗೂ ನೃತ್ಯವನ್ನು ಜೊತೆಯಾಗಿ ಕೊಂಡೊಯ್ಯುವ ಒಂದು ಹೊಸ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ನಿರ್ದೇಶಕರಾದ ಮಾನ‌ಸಿ ಹಾಗೂ ಸುಧೀರ್‌ರಾವ್‌ ಪ್ರಯತ್ನ ಸಫ‌ಲವಾಯ್ತು ಎನ್ನಲಡ್ಡಿಯಿಲ್ಲ. 

ಜನನಿ ಭಾಸ್ಕರ ಕೊಡವೂರು 

Advertisement

Udayavani is now on Telegram. Click here to join our channel and stay updated with the latest news.

Next