ಶೃಂಗೇರಿ: ಕೋವಿಡ್ ಪರಿಣಾಮದಿಂದ ಬಂದ್ ಆಗಿದ್ದ ಬಸ್ ಸಂಚಾರ ಸರಕಾರ ಪುನಾರಂಭಿಸಿದ್ದರೂ, ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಮುಖವಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ಸಾರಿಗೆ ಸಂಸ್ಥೆಯು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಪ್ರಾಯೋಗಿಕವಾಗಿ ಎರಡು ಬಸ್ಸನ್ನು ಶೃಂಗೇರಿಗೆ ಬಿಟ್ಟಿದೆ. ಚಿಕ್ಕಮಗಳೂರಿನಿಂದ 12 ಗಂಟೆಗೆ ಶೃಂಗೇರಿಗೆ ಹೊರಟಿದ್ದ ಬಸ್ ನಲ್ಲಿ ಕೇವಲ ಇಬ್ಬರು ಪ್ರಯಾಣಿಕರು ಇದ್ದು, ಸಂಜೆ ಪುನ: ಚಿಕ್ಕಮಗಳೂರಿಗೆ ತೆರಳುವಾಗ ಕೇವಲ ನಾಲ್ಕು ಮಂದಿ ಪ್ರಯಾಣಿಕರು ಈ ಬಸ್ಸನ್ನು ಬಳಸಿದ್ದಾರೆ.
ಇದೇ ರೀತಿ ಶಿವಮೊಗ್ಗದಿಂದ ಶೃಂಗೇರಿಗೆ ಬೆಳಗ್ಗೆ 8 ಗಂಟೆಗೆ ಹೊರಟಿದ್ದ ಬಸ್‌ನಲ್ಲಿ ಶೃಂಗೇರಿಗೆ ಯಾವುದೇ ಪ್ರಯಾಣಿಕರು ಇಲ್ಲದೇ ಹೋಗಿದ್ದರಿಂದ ಚಾಲಕ ಹಾಗೂ ನಿರ್ವಾಹಕ ಮಾತ್ರ ಬಂದಿದ್ದಾರೆ. ಸಂಜೆ ಪುನ: ಶಿವಮೊಗ್ಗಕ್ಕೆ ತೆರಳಬೇಕಾಗಿತ್ತು. ಆದರೆ, ಪ್ರಯಾಣಿಕರು ಇಲ್ಲದ ಕಾರಣ ಇದನ್ನು ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ.
ಸಾರ್ವಜನಿಕರಿಗೆ ಬಸ್ ಸಂಚಾರ ಆರಂಭವಾಗಿರುವುದರ ಪೂರ್ಣ ಅರಿವು ಇಲ್ಲದಿರುವುದು ಒಂದೆಡೆಯಾದರೆ, ಬಸ್ ನಲ್ಲಿ ಪ್ರಯಣಿಸುವುದರಿಂದ ಸೋಂಕು ಹರಡಬಹುದೋ ಎನ್ನುವ ಒಳಗೊಳಗಿನ ಭಯದ ಕಾರಣ ಜನ ಪ್ರಯಾಣ ಮುಂದೂಡಿದ್ದಾರೆ. ಹಂತ ಹಂತವಾಗಿ ಬಸ್ ಬಳಕೆಯಲ್ಲಿ ಸ್ವಲ್ಪ ಸುಧಾರಣೆ ಆಗಬಹುದು ಎಂಬುದು ಸಾರಿಗೆ ನಿಯಂತ್ರಕರ ಅನಿಸಿಕೆಯಾಗಿದೆ.
ಈ ನಡುವೆ ಎರಡೂ ಜಿಲ್ಲೆಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹಠಾತ್ ಹೆಚ್ಚಿರುವುದು ಬಸ್ ಪ್ರಯಾಣಕ್ಕೆ ಜನರಲ್ಲಿ ಹಿಂಜರಿಕೆ ಉಂಟು ಮಾಡಬಹುದು ಎಂದು ಡಿಪೋ ಕಾರ್ಯನಿರ್ವಾಹಕ ಶಿವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.