Advertisement

32 ಗಂಟೆಗಳ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆ

09:46 AM Feb 14, 2018 | Team Udayavani |

ಶ್ರೀನಗರ: ಇಲ್ಲಿನ ಕರಣ್‌ನಗರದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಲು ವಿಫ‌ಲ ಯತ್ನ ನಡೆಸಿದ್ದ ಉಗ್ರರನ್ನು ಸದೆಬಡಿಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಸತತ 32 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯ ಬಳಿಕ ಕೊನೆಗೂ ಸೇನಾ ಶಿಬಿರದ ಪಕ್ಕದ ಕಟ್ಟಡದ‌ಲ್ಲಿ ಅಡಗಿದ್ದ ಇಬ್ಬರು ಉಗ್ರರನ್ನು ಸದೆಬಡಿಯಲಾಗಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣಾ ಪಡೆ ಹಾಗೂ ಸಿಆರ್‌ಪಿಎಫ್ ಯೋಧರು ನಡೆಸಿದ ಜಂಟಿ ಕಾರ್ಯಾಚರಣೆ ಮಂಗಳವಾರ ಅಂತ್ಯಕಂಡಿದೆ.

Advertisement

ಎನ್‌ಕೌಂಟರ್‌ ಬಳಿಕ ನಿರ್ಮಾಣಹಂತದಲ್ಲಿದ್ದ ಕಟ್ಟಡದಲ್ಲಿ ಅವಿತಿದ್ದ ಉಗ್ರರ ಮೃತದೇಹಗಳು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಸಿಆರ್‌ಪಿಎಫ್ ಐಜಿ ರವಿದೀಪ್‌ ಸಾಹಿ ತಿಳಿಸಿದ್ದಾರೆ. ಸೋಮವಾರ ಮುಂಜಾನೆ ಲಷ್ಕರ್‌ ಉಗ್ರರು ಕರಣ್‌ನಗರದ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿಗೆ ಯತ್ನಿಸಿದ್ದರು. ಯೋಧರು ಕೂಡಲೇ ಎಚ್ಚೆತ್ತು ಪ್ರತಿದಾಳಿ ಆರಂಭಿಸಿದ ಕಾರಣ ದೊಡ್ಡ ಪ್ರಮಾಣದ ಸಾವು-ನೋವು ತಪ್ಪಿತ್ತು. ಆದರೆ, ಉಗ್ರರು ಪಕ್ಕದ 5 ಮಹಡಿಯ ಕಟ್ಟಡದಲ್ಲಿ ಅವಿತುಕೊಂಡಿದ್ದ ಕಾರಣ ಕಾರ್ಯಾಚರಣೆ ವಿಳಂಬವಾಯಿತು ಎಂದೂ ಸಾಹಿ ಮಾಹಿತಿ ನೀಡಿದ್ದಾರೆ. ಸೋಮವಾರದ ಗುಂಡಿನ ಚಕಮಕಿ ವೇಳೆ ಒಬ್ಬ ಯೋಧ ಹುತಾತ್ಮರಾದರೆ, ಮತ್ತೂಬ್ಬರು ಗಾಯಗೊಂಡಿದ್ದರು.

ಸಂಜ್ವಾನ್‌ ದಾಳಿ: ಮೃತರ ಸಂಖ್ಯೆ 7ಕ್ಕೇರಿಕೆ
ಜಮ್ಮುವಿನ ಸಂಜ್ವಾನ್‌ ಸೇನಾಶಿಬಿರದ ವಸತಿ ಕಟ್ಟಡದಲ್ಲಿ ಜೈಶ್‌ ಉಗ್ರರ ಅಟ್ಟಹಾಸಕ್ಕೆ ಬಲಿಯಾದವರ ಸಂಖ್ಯೆ 7ಕ್ಕೇರಿಕೆಯಾಗಿದೆ. ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ ಮಂಗಳವಾರ ಮತ್ತೂಬ್ಬ ಯೋಧನ ಮೃತದೇಹ ಪತ್ತೆಯಾಗಿದೆ. ಹೀಗಾಗಿ, ದಾಳಿಯಲ್ಲಿ 6 ಮಂದಿ ಯೋಧರು ಹಾಗೂ ಒಬ್ಬ ನಾಗರಿಕ ಸಾವಿಗೀಡಾದಂತಾ ಗಿದೆ. ಮೂವರು ಉಗ್ರರನ್ನು ಸೇನೆ ಹತ್ಯೆಗೈದಿತ್ತು. ಕಳೆದ ಶನಿವಾರ ಸೇನಾನೆಲೆ ಮೇಲೆ ಜೈಶ್‌ ಉಗ್ರರು ದಾಳಿ ನಡೆಸಿದ್ದರು. 

ಗೃಹ ಸಚಿವರ ಶ್ಲಾಘನೆ: ಇದೇ ವೇಳೆ, ಸಂಜ್ವಾನ್‌ ದಾಳಿ ವೇಳೆ ಉಗ್ರರ ಗುಂಡಿಗೆ ಎದೆಯೊಡ್ಡಿದ ಯೋಧನ ಪತ್ನಿಯ ಧೈರ್ಯವನ್ನು ಗೃಹ ಸಚಿವ ರಾಜನಾಥ್‌ ಸಿಂಗ್‌ ಶ್ಲಾ ಸಿದ್ದಾರೆ. ಗುಂಡೇಟು ತಿಂದಿದ್ದ ಶೆಹಜಾದ್‌ ಖಾನ್‌ ಸೋಮವಾರವಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಮಂಗಳವಾರ ಗೃಹ ಸಚಿವರ ಪರವಾಗಿ ಸಿಆರ್‌ಪಿಎಫ್ ವಿಶೇಷ ನಿರ್ದೇಶಕ ಎಸ್‌.ಎನ್‌.ಶ್ರೀವಾಸ್ತವ ಅವರು ಶೆಹಜಾದ್‌ರನ್ನು ಭೇಟಿಯಾಗಿ ಹೂಗುತ್ಛ ನೀಡಿ ಅಭಿನಂದಿಸಿದರು. 

ಭಾರತಕ್ಕೆ ಅದರದ್ದೇ ರೀತಿ ಪ್ರತ್ಯುತ್ತರ: ಪಾಕ್‌
ಜಮ್ಮುವಿನ ಸಂಜ್ವಾನ್‌ ಸೇನಾನೆಲೆಯಲ್ಲಾದ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡವಿದೆ ಎಂಬ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಆರೋಪವನ್ನು ಪಾಕಿಸ್ಥಾನ ತಳ್ಳಿಹಾಕಿದೆ. ಅಷ್ಟೇ ಅಲ್ಲ, ಭಾರತವು ದುಸ್ಸಾಹಸಕ್ಕೆ ಮುಂದಾದರೆ, ಅದಕ್ಕೆ ಅದರದ್ದೇ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತೇವೆ ಎಂಬ ಎಚ್ಚರಿಕೆ ಸಂದೇಶವನ್ನೂ ನೆರೆರಾಷ್ಟ್ರ ರವಾನಿಸಿದೆ. ಸೋಮವಾರವಷ್ಟೇ ಸಚಿವೆ ನಿರ್ಮಲಾ ಅವರು, “ಪಾಕಿಸ್ಥಾನದ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು’ ಎಂದಿದ್ದರು. ಇದಕ್ಕೆ ಮಂಗಳವಾರ ಪ್ರತಿಕ್ರಿಯಿಸಿರುವ ಪಾಕ್‌ ರಕ್ಷಣಾ ಸಚಿವ ಖುರ್ರಂ ದಸ್ತಗಿರ್‌ ಖಾನ್‌, ನಾವೂ ಭಾರತಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ. ಎಲ್ಲದಕ್ಕೂ ಪಾಕಿಸ್ಥಾನವನ್ನು ದೂಷಿಸುವುದರ ಬದಲಿಗೆ, ಪಾಕ್‌ ವಿರುದ್ಧ ನಡೆಸುತ್ತಿರುವ ಬೇಹುಗಾರಿಕೆ ಕುರಿತು ಭಾರತ ಉತ್ತರ ನೀಡಲಿ ಎಂದಿದ್ದಾರೆ.

Advertisement

ಬುಲೆಟ್‌ಗಳ ಶಬ್ದ, ಚೆಲ್ಲಿದ ರಕ್ತದ ಕಲೆಗಳ ನಡುವೆಯೇ ಪಾಕ್‌ ಜತೆ ಮಾತುಕತೆ ನಡೆಸುವಂತೆ ಕೆಲವರು ಸೂಚಿಸುತ್ತಿದ್ದಾರೆ. 
ಆದರೆ, ಉಗ್ರರ ದಾಳಿಗೆ ಪಾಕಿಸ್ಥಾನವು ಬಹಿರಂಗವಾಗಿಯೇ ಬೆಂಬಲ ನೀಡುತ್ತಿರುವಂಥ ಈ ಸಂದರ್ಭದಲ್ಲಿ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ.

ಸುನೀಲ್‌ ಸೇಥಿ, ಜಮ್ಮು-ಕಾಶ್ಮೀರ ಬಿಜೆಪಿ ವಕ್ತಾರ

ಸಂಜ್ವಾನ್‌ ದಾಳಿಯಲ್ಲಿ ಹುತಾತ್ಮರಾದ 7 ಯೋಧರ ಪೈಕಿ 5 ಮಂದಿ ಕಾಶ್ಮೀರಿ ಮುಸ್ಲಿಮರು. ಆದರೆ, ದಾಳಿ ನಡೆದು 4 ದಿನಗಳಾ ದರೂ ಪ್ರಧಾನಿ ಮೋದಿ ಅವರು ಒಂದೇ ಒಂದು ಟ್ವೀಟ್‌ ಮಾಡಿಲ್ಲ. ದೇಶದ ಬಗೆಗಿನ ಮುಸ್ಲಿಮರ ಪ್ರೀತಿ, ವಿಧೇಯತೆಯನ್ನು ಪ್ರಶ್ನಿಸುವವರೂ ಮೌನ ವಹಿಸಿರುವುದೇಕೆ?
ಅಸಾದುದ್ದೀನ್‌ ಒವೈಸಿ, ಎಐಎಂಐಎಂ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next