Advertisement
ರಾಜಧಾನಿ ಕೊಲಂಬೋದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಹೆಚ್ಚೆಚ್ಚು ಜನರು ಸೇರ್ಪಡೆ ಗೊಳ್ಳುತ್ತಿರುವುದನ್ನು ಗಮನಿಸಿರುವ ಸರಕಾರ ಪ್ರತಿಭಟನ ಸ್ಥಳಕ್ಕೆ ಹತ್ತಿರವಿರುವ ಗಲ್ಲೆ ಫೇಸ್ ಗ್ರೀನ್ ಅರ್ಬನ್ ಪಾರ್ಕ್ ಎಂಬ ಬೃಹತ್ ಮೈದಾನವನ್ನು ಮುಚ್ಚಿದೆ. ಈ ಪಾರ್ಕ್‌ನ ಸಮೀಪವೇ ಶ್ರೀಲಂಕಾ ಅಧ್ಯಕ್ಷರ ಅಧಿಕೃತ ಕಚೇರಿ ಹಾಗೂ ವಿವಿಧ ಸಚಿವರ ಸಚಿವಾಲಯಗಳು ಇವೆ. ಇತ್ತೀಚಿನ ದಿನಗಳಲ್ಲಿ ಪ್ರತಿಭಟನಾಕಾರರು ಮೈದಾನದ ಆಚೆಗೆ ನಿಂತು ಪ್ರತಿಭಟನೆ ಮಾಡುತ್ತಿದ್ದುದನ್ನು ಗಮನಿಸಿದ ಸರಕಾರ ಈ ಕಚೇರಿಗಳನ್ನು ಮುಚ್ಚಿತ್ತು. ಈಗ, ಮೈದಾನಕ್ಕೆ ಪ್ರತಿಭಟನಾಕಾರರು ಕಾಲಿಡವುದನ್ನು ಹತ್ತಿಕ್ಕುವ ಸಲುವಾಗಿ ಪಾರ್ಕ್ ಅನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ.
ಮತ್ತೂಂದೆಡೆ, ಶ್ರೀಲಂಕಾದ ಪ್ರಮುಖ ವಿಪಕ್ಷವಾದ ಸಮಗಿ ಜನ ಬಲವೆಗಯ (ಎಸ್‌ಜೆಬಿ), ಗೊಟಬಯಾ ರಾಜಪಕ್ಸೆ ಸರಕಾರದ ವಿರುದ್ಧ ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ಹೇಳಿದೆ. ಜನರ ದಂಗೆ ಕಾರಣವಾಗಿರುವ ಸಮಸ್ಯೆಗಳನ್ನು ಬೇಗನೇ ನಿವಾರಿಸದಿದ್ದಲ್ಲಿ ರಾಜಪಕ್ಸ ಅವರ ಮಹಾಭಿಯೋಗದ ಕುರಿತಾಗಿ ಮತ್ತೂಂದು ಗೊತ್ತುವಳಿ ಮಂಡಿಸುವುದಾಗಿ ಎಸ್‌ಜೆಬಿ ತಿಳಿಸಿದೆ. ಐಎಂಎಫ್ ಗೆ ನಿಯೋಗ ಕಳುಹಿಸಲು ಚಿಂತನೆ: ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ದೇಶದ ಖ್ಯಾತ ಆರ್ಥಿಕ ತಜ್ಞರನ್ನೆಲ್ಲ ಒಟ್ಟುಗೂಡಿಸಿ ಅಧ್ಯಕ್ಷರ ಸಲಹ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಮಿತಿಯು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಹಾಯದಿಂದ ಹಾಗೂ ಇನ್ನಿತರ ದೇಶಗಳಿಂದ ಸಾಲ ತರುವ ಮೂಲಕ 65 ಸಾವಿರ ಕೋಟಿ ರೂ.ಗಳ ಸಾಲವನ್ನು ತೀರಿಸುವ ಕುರಿತಂತೆ ರೂಪುರೇಷೆ ಸಿದ್ಧಪಡಿಸಲಿದೆ. ಇದಕ್ಕಾಗಿ ಸದ್ಯದಲ್ಲೇ ಈ ನಿಯೋಗ ಐಎಂಎಫ್ಗೆ ಭೇಟಿ ನೀಡಲಿದೆ.
Related Articles
ಆರ್ಥಿಕ ಅಧೋಗತಿಯ ಜತೆಗೆ ಬ್ಯಾಂಕ್‌ಗಳ ಬಡ್ಡಿದರವನ್ನು ಏರಿಸುವ ನಿರ್ಧಾರವನ್ನು ಶ್ರೀಲಂಕಾ ಸರಕಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಬಡ್ಡಿದರವನ್ನು 700 ಬೇಸಿಸ್ ಪಾಯಿಂಟ್‌ಗಳಷ್ಟು ದಾಖಲೆಯ ಮಟ್ಟಕ್ಕೆ ಏರಿಸಲಾಗಿದೆ. ಇದರ ಪರಿಣಾಮವಾಗಿ, ಜನರು ಬ್ಯಾಂಕ್‌ಗಳಿಂದ ತೆಗೆದುಕೊಂಡಿರುವ ಸಾಲದ ಮೇಲಿನ ಬಡ್ಡಿದರ ಶೇ.14.5ಕ್ಕೆ ಏರಿದೆ.
Advertisement
ಬ್ಯಾಂಕ್‌ಗಳಲ್ಲಿರುವ ಜನರ ಠೇವಣಿಗಳ ಮೇಲಿನ ಬಡ್ಡಿಯನ್ನೂ ಶೇ.13.5ಕ್ಕೆ ಹೆಚ್ಚಿಸಲಾಗಿದೆ. ಸಾಲದ ಮೇಲೆ ಬಡ್ಡಿ ಹೆಚ್ಚಾಗುವುದರಿಂದ ಮತ್ತಷ್ಟು ರೊಚ್ಚಿಗೇಳುವ ಜನರನ್ನು ಸಮಾಧಾನ ಪಡಿಸಲು ಉಳಿತಾಯ ಠೇವಣಿಗಳ ಮೇಲಿನ ಬಡ್ಡಿದರ ಏರಿಸಲಾಗಿದೆಯಷ್ಟೇ ಎಂದು ವಿಪಕ್ಷಗಳು ಸರಕಾರದ ಕ್ರಮವನ್ನು ಟೀಕಿಸಿದ್ದಾರೆ.