ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದ ಆಸ್ತಿಗಳ ಸರ್ವೆ ಕಾರ್ಯ ಬುಧವಾರದಿಂದ ಆರಂಭವಾಗಿದ್ದು, ದೇವಾಲಯದ ಭೂಮಿಯನ್ನು ಆಕ್ರಮಿಸಿಕೊಂಡವರಲ್ಲಿ ನಡುಕ ಹುಟ್ಟಿಸಿದೆ. ಮಹಾರಾಜರ ಆರಾಧ್ಯ ದೇವರಾಗಿದ್ದ ನಂಜನಗೂಡಿನ ನಂಜುಂಡಪ್ಪನಿಗೆ ರಾಜರ ಕಾಲದಲ್ಲಿ ಸಾವಿರಾರು ಎಕರೆ ಆಸ್ತಿ ಇದ್ದು, ಕಾಲಕ್ರಮೇಣ ಈ ಪೈಕಿ ಸಾಕಷ್ಟು ಭೂಮಿಯನ್ನು ಅತಿಕ್ರಮಿಸಿಕೊಳ್ಳಲಾಗಿದೆ ಎಂದು ದೂರುಗಳು ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಶಾಸಕ ಹರ್ಷವರ್ಧನ, ದೇವಾಲಯದ ಆಸ್ತಿಗಳನ್ನು ರಾಜ್ಯ ಮುಜರಾಯಿ ಇಲಾಖೆಯಿಂದಲೇ ಸರ್ವೆ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಇದಕ್ಕಾಗಿ ಸರ್ಕಾರಕ್ಕೆ 2018ರಲ್ಲೇ ಪತ್ರ ಬರೆದಿದ್ದರು. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಇದೀಗ ಮುಜರಾಯಿ ಇಲಾಖೆ ಅಧಿಕಾರಿಗಳು ಬುಧವಾರ ನಂಜನಗೂಡಿಗೆ ಆಗಮಿಸಿದ್ದು, ಆಸ್ತಿಗಳ ನಿಖರವಾದ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ.
ರಾಜ್ಯ ಮುಜರಾಯಿ ಇಲಾಖೆಯ ಅಳತೆ ವಿಭಾಗದ ಅಧಿಕಾರಿಗಳಾದ ರವಿಕುಮಾರ್ ಹಾಗೂ ಸೋಮಶೇಖರ್ ಶ್ರೀಕಂಠೇಶ್ವರ ದೇವಾಲಯಕ್ಕೆ ಆಗಮಿಸಿ ದಾಸೋಹ ಭವನದ ಸಭಾಂಗಣದಲ್ಲಿ ತಾಲೂಕಿನ ಸರ್ವೆ, ಕಂದಾಯ, ನಗರಸಭೆ ಹಾಗೂ ದೇವಾಲಯದ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪ್ರಥಮ ಮಾಹಿತಿ ಸಂಗ್ರಹಿಸಿ ಬಳಿಕ ದೇವಾಲಯದ ಸುತ್ತಲಿನ ಜಾಗಗಳ ಸರ್ವೆ ಆರಂಭಿಸಿದರು.
ಸರ್ವೆ ಕಾರ್ಯದಲ್ಲಿ ತಾಲೂಕು ಸರ್ವೆ ಅಧಿಕಾರಿ ಮಂಟೆಲಿಂಗಯ್ಯ, ನಗರಸಭೆ ಕಂದಾಯ ಅಧಿಕಾರಿ ರಾಣಿ, ಶ್ರೀನಿವಾಸ್, ಕಂದಾಯ ಇಲಾಖೆಯ ಪ್ರಕಾಶ್, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ, ಅಭಿವೃದ್ಧಿ ಸಮಿತಿ ಸದಸ್ಯರಾದ ರವಿ, ಮಂಜುಳಾ, ಪುಟ್ಟಲಿಂಗಶೆಟ್ಟಿ, ಶಶಿರೇಖಾ ಇತರರಿದ್ದರು.
ಒತ್ತುವರಿ ತೆರವು ಶತಸಿದ್ಧ: ಈ ಕುರಿತು ಪ್ರತಿಕ್ರಿಯಿಸಿದ ಅಳತೆ ವಿಭಾಗದ ಅಧಿಕಾರಿಗಳಾದ ರವಿಕುಮಾರ್, ತಾವು ಇಲ್ಲಿನ ಅಧಿಕಾರಿಗಳ ಬಳಿ ಇರುವ ಮಾಹಿತಿಯನ್ನು ಸಂಗ್ರಹಿಸಿದ ನಂತರ ತಮ್ಮ ಇಲಾಖೆಯಲ್ಲಿರುವ ಹಳೆಯ ದಾಖಲೆಗಳೊಂದಿಗೆ ತಾಳೆ ಹಾಕಿ ವರದಿ ಸಿದ್ಧª ಪಡಿಸಿಕೊಂಡ ನಂತರವೇ ಆಸ್ತಿಯ ಒತ್ತುವರಿ ಲೆಕ್ಕ ಸಿಗಲಿದೆ. ಇಲ್ಲಿನ ಸ್ಥಿತಿಗತಿಗಳನ್ನು ನೋಡಿದರೆ ಈ ಕಾರ್ಯಕ್ಕೆ ತಿಂಗಳು ಸಮಯ ಬೇಕಾಗುತ್ತದೆ. ಸರ್ವೆ ಕಾರ್ಯ ಪೂರ್ಣಗೊಂಡ ನಂತರ ದೇವಾಲಯದ ಆಸ್ತಿ ಒತ್ತುವರಿಯನ್ನು ತೆರವುಗೊಳಿಸುವುದು ಶತಸಿದ್ಧ ಎಂದು ಎಚ್ಚರಿಕೆ ನೀಡಿದರು.