ಉಪ್ಪಳ: ಭಗವಂತ ನೀಡಿರುವ ಮಾನವ ಜನ್ಮವನ್ನು ಸತ್ಪಾತ್ರ ಕರ್ಮಗಳಿಂದ ಪಾವನಗೊಳಿಸಿದಾಗ ನೆಮ್ಮದಿ ಲಭ್ಯವಾಗುತ್ತದೆ. ಜನ್ಮಜನ್ಮಾಂ ತರಗಳ ಪಾಪಕರ್ಮದ ಲೇಪಗಳು ಸದ್ವಿಚಾರಧಾರೆಗಳಿಂದ ನಿರಂತರವಾಗಿ ತೊಯ್ದುಕೊಂಡಾಗ ಬದುಕು ಸಾರ್ಥಕ್ಯಗೊಂಡು ಭಗವದನುಗ್ರಹಕ್ಕೆ ಪಾತ್ರವಾಗುತ್ತದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅನುಗ್ರಹ ಭಾಷಣ ಮಾಡಿದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಗುರುಪೀಠ ಪ್ರತಿಷ್ಠೆಯ ಹದಿನೈದನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ನಡೆದ ಧಾರ್ಮಿಕ ಸಂಸತ್ತಿನಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಸನ್ಯಾಸ ಜೀವನದ ಮೂಲಕ ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಹೊಸ ಸಾಧನೆಗಳಿಗೆ ತಮ್ಮೊಡನೆ ಕೈಜೋಡಿಸಿ ಸಹಕರಿಸುತ್ತಿರುವ ಎಲ್ಲರನ್ನು ಶ್ರೀ ಗಳು ಈ ಸಂದರ್ಭ ಸ್ಮರಿಸಿ ಭಗವದನುಗ್ರಹಕ್ಕೆ ಸಂಪ್ರಾರ್ಥಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಸಂಸ್ಕೃತ ವಿದ್ವಾಂಸ, ಕೇರಳ ರಾಜ್ಯ ಸಂರಕ್ಷಣಾ ಸಮಿತಿ ಪ್ರಮುಖ್ ಪ್ರೊ| ನಾರಾಯಣನ್ ಭಟ್ಟತ್ತಿರಿಪಾಡ್ ಅವರು ಮಾತನಾಡಿ, ರಾಷ್ಟ್ರದ ಉದ್ದಗಲ ಹರಡಿಕೊಂಡಿರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮಾನಸಿಕ, ಬೌದ್ಧಿಕ ಚಿಕಿತ್ಸಾ ಕೇಂದ್ರಗಳಾಗಿ ಮಹತ್ವ ಪಡೆದಿದ್ದು ವೈಜ್ಞಾನಿಕ ಹಿನ್ನೆಲೆಯ ಫಲ ನೀಡುತ್ತವೆ ಎಂದು ತಿಳಿಸಿದರು. ಸಮಾಜವಾದದ ಪರಿಕಲ್ಪನೆಯ ಇಂದಿನ ವ್ಯವಸ್ಥೆಗೆ ಮೂಲ ವೇದಗಳಾಗಿದ್ದು, ಯಜ್ಞ-ಯಾಗಗಳ ಕರ್ಮದ ಮೂಲ ಸಮಾಜವಾದವನ್ನು ಬೆಂಬಲಿಸಿವೆ ಎಂದು ತಿಳಿಸಿದರು. ಮತ್ತೋರ್ವ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀಧರನ್ ನಂಬೂದಿರಿ ಮಾತನಾಡಿ ಭರತ ಖಂಡ ಲಕ್ಷಾಂತರ ವರ್ಷಗಳಿಂದಲೂ ನೆಲೆ ನಿಂತಿರುವುದು ಸಂತ ಶ್ರೇಷ್ಠರ ತಪಸ್ಸಿನ ಫಲದಿಂದ. ಮನುಷ್ಯ ಜೀವನದ ಧರ್ಮಮಾರ್ಗವನ್ನು ಸನ್ಯಾಸ ಧರ್ಮ ಎತ್ತಿ ಹಿಡಿಯುತ್ತದೆ. ಲೋಕ ಕಲ್ಯಾಣದ ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮ ಈ ಮಣ್ಣಿನ ಯೋಗದ ಫಲವೆಂದು ತಿಳಿಸಿದರು.
ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ನ್ಯಾಯವಾದಿ ಮೋನಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಡಾ| ಮೋಹನ್ ರಾವ್ ಬೆಂಗಳೂರು, ಸದಾನಂದ ನಾವೂರು ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ನ್ಯಾಯವಾದಿ ಗಂಗಾಧರ ಕೊಂಡೆ ವೂರು ಸ್ವಾಗತಿಸಿ, ವಂದಿಸಿದರು. ವಿದ್ಯಾಧರ್ ಕಾರ್ಯಕ್ರಮ ನಿರೂಪಿಸಿದರು. ನಂದನೇಶ್ವರ್ ಪ್ರಾರ್ಥನಾಗೀತೆ ಹಾಡಿದರು.
ಶ್ರೀ ಗುರುಪೀಠದ ಹದಿನೈದನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ವೇದಮೂರ್ತಿ ಕುಂಬಳೆ ಹರಿನಾರಾಯಣ ಮಯ್ಯ ಅವರ ಪೌರೋಹಿತ್ಯದಲ್ಲಿ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿದವು. ಬಳಿಕ ತಲಪಾಡಿಯ ಯಕ್ಷ ಸಿಂಧೂರ ಮಹಿಳಾ ಯಕ್ಷಗಾನ ಮಂಡಳಿಯವರಿಂದ “ಅತಿಕಾಯ ಮೋಕ್ಷ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.
ತಮ್ಮ ಸನ್ಯಾಸ ಜೀವನದಲ್ಲಿ ಕೈನೀಡಿ ಸಹಕರಿಸುತ್ತಿರುವ ಗುರುಗಳಾದ ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಶ್ರೀಗಳು ಮತ್ತು ಕಟೀಲಿನ ಆಸ್ರಣ್ಣರುಗಳನ್ನು ನೆನಪಿಸಿ ಅವರ ಆಶೀರ್ವಾದ ಮತ್ತು ನಿರ್ದೇಶನಗಳ ಕಾರಣಗಳಿಂದ ವಿವಿಧ ಕಾರ್ಯ ಚಟುವಟಿಕೆಗಳನ್ನು ಕೊಂಡೆವೂರು ಕೇಂದ್ರೀಕರಿಸಿ ನಡೆಸಲು ಸಾಧ್ಯವಾಗಿದೆ ಎಂದು ಕೊಂಡೆವೂರು ಶ್ರೀಗಳು ತಿಳಿಸಿದರು.