Advertisement
ಉಡುಪಿ ಶ್ರೀ ಕೃಷ್ಣ ದೇಗುಲ ಹೊರಭಾಗದಲ್ಲಿ ಪುರಸಭೆ ಜಾಗದಲ್ಲಿದ್ದ ಕನಕ ಗೋಪುರ ಶಿಥಿಲವಾಗಿದ್ದ ಕಾರಣ ತೆರವುಗೊಳಿಸಲಾಯಿತು. ಆದರೆ, ಅದು ವಿವಾದದ ಸ್ವರೂಪ ಪಡೆದಾಗ ಹೋರಾಟಗಾರರನ್ನು ಕರೆಸಿ ಮಾತನಾಡಿ ಕನಕ ಪ್ರತಿಮೆ ಸಹಿತ ಗೋಪುರ ನಿರ್ಮಾಣ ಮಾಡಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಣೆಯಾಗುವಂತೆ ಮಾಡಿ ಹೋರಾಟಗಾರ ಪ್ರೀತಿಗೆ ಪಾತ್ರರಾಗಿದ್ದರು.
Related Articles
Advertisement
ಎಚ್.ವಿಶ್ವನಾಥ್, ಎಚ್.ಎಂ.ರೇವಣ್ಣ ಅವರು ಹೋರಾಟದ ಜತೆಗೂಡಿದ್ದರು. ಆ ಸಂದರ್ಭದಲ್ಲಿ ಅಮೆರಿಕದಲ್ಲಿ ಅಕ್ಕ ಸಮ್ಮೇಳನಕ್ಕೆ ಹೋಗಿದ್ದ ಸಿದ್ದರಾಮಯ್ಯ ಅವರೂ ಹೋರಾಟಗಾರರ ಜತೆ ಮಾತನಾಡಿ ಸೌಹಾರ್ಧತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ವಿವಾದ ಅಥವಾ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು. ಶ್ರೀಗಳ ಜತೆ ಕುಳಿತು ಚರ್ಚಿಸಿ ಎಂದು ಸೂಚನೆ ನೀಡಿದ್ದರು. ಕೆ.ಎಸ್. ಈಶ್ವರಪ್ಪ ಅವರು ಸಹ ಶ್ರೀಗಳ ಜತೆ ಮಾತುಕತೆ ನಡೆಸಿದ್ದರು.
ವಿನಯಪೂರ್ವಕ ಮಾತು: ಕನಕ ಗೋಪುರ ಹೋರಾಟದ ಮುಂಚೂಣಿಯಲ್ಲಿದ್ದ ಧಾರವಾಡದ ಬಸವರಾಜ ದೇವರು ಅವರೇ ಹೇಳುವಂತೆ, ನಾವು ಮೊದಲಿಗೆ ಶ್ರೀಗಳ ಜತೆ ಮಾತುಕತೆಗೆ ನಿರಾಕರಿಸಿದರೂ ಅವರು ಬೇಸರಪಟ್ಟುಕೊಳ್ಳದೆ ಮತ್ತೆ ಮಾತುಕತೆಗೆ ಆಹ್ವಾನಿಸಿ ಕನಕಗೋಪುರ ನಿರ್ಮಿಸಿದರು. ಕನಕನ ಕಿಂಡಿಗೆ ನವಗ್ರಹ ಕಿಂಡಿ, ಕನಕ ಗೋಪುರಕ್ಕೆ ರಾಜಗೋಪುರ ಎಂದು ಹೆಸರು ಇದ್ದದ್ದನ್ನು ಮತ್ತೆ ಕನಕನ ಕಿಂಡಿ, ಕನಕ ಗೋಪುರ ಎಂದು ಹೆಸರು ಮುಂದುವರಿಯುವಂತೆ ಮಾಡಿದರು.
ತೆರದ ಮನಸ್ಸಿನಿಂದ ಸಮಾಧಾನದಿಂದ ಆಲಿಸಿದ್ದರು. ಕನಕದಾಸರು ಹೊರಗೆ ಪ್ರತಿಮೆಯಾಗಿ ಮಾತ್ರ ನಿಲ್ಲುವಂತಾಗಬಾರದು. ಶ್ರೀ ಕೃಷ್ಣ ದೇಗುಲದ ಒಳಗೆ ಕನಕದಾಸರಿಗೆ ಮಾನ್ಯತೆ ಸಿಗಬೇಕು ಎಂಬುದು ನಮ್ಮ ಬೇಡಿಕೆಯಿತ್ತು. ಅದರ ಬಗ್ಗೆ ಶ್ರೀಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಕನಕದಾಸರ ಬಗ್ಗೆ ಅಧ್ಯಯನ ಮಾಡಿದ್ದ ಅವರು ಅಪಾರ ಗೌರವ ಹೊಂದಿದ್ದರು ಎಂದು ಸ್ಮರಿಸುತ್ತಾರೆ.
ವಿಶ್ವೇಶತೀರ್ಥರು ಯಾವುದೇ ವಿಚಾರ ಇರಲಿ ತಾಳ್ಮೆ ಸಮಾಧಾನದಿಂದ ಕೇಳುತ್ತಿದ್ದರು. ಯಾವ ರೀತಿ ಪರಿಹಾರ ಸಾಧ್ಯ ಎಂಬುದರ ಬಗ್ಗೆಯೂ ಮನವರಿಕೆ ಮಾಡಿಕೊಡುತ್ತಿದ್ದರು. ಒಂದೊಮ್ಮೆ ಒಪ್ಪದಿದ್ದರೆ ನೀವೇ ಪರಿಹಾರ ಸೂಚಿಸಿ ನ್ಯಾಯಸಮ್ಮತವಾದರೆ ನಾನು ಒಪ್ಪುತ್ತೇನೆ ಎಂದು ಹೇಳುತ್ತಿದ್ದರು. ಅಷ್ಟು ದೊಡ್ಡ ಗುಣ ಅವರಲ್ಲಿ ಇತ್ತು ಎಂದು ಹೇಳುತ್ತಾರೆ.
ಮನಸ್ಸಿದ್ದರೆ ಮಾರ್ಗ ಪ್ರತಿಪಾದಕರು: ಮಡೆಸ್ನಾನ ವಿಚಾರ ವಿವಾದದ ಸ್ವರೂಪ ಪಡೆದಾಗಲೂ ಮಡೆಸ್ನಾನ ಬದಲು ಎಡೆಸ್ನಾನ ಪದ್ಧತಿ ಜಾರಿಗೊಳಿಸಿ ಹೋರಾಟಗಾರರ ಮನವೊಲಿಕೆಗೆ ಮುಂದಾಗಿದ್ದರು. ಯಾವುದೇ ಸಮಸ್ಯೆಗೂ ಪರಿಹಾರ ಇದ್ದೇ ಇದೆ. ಆದರೆ, ಪರಸ್ಪರ ನಿಷ್ಕಲ್ಮಷ ಮನಸ್ಸಿನಿಂದ ಕುಳಿತು ಮಾತನಾಡಬೇಕು ಎಂಬುದನ್ನು ಪ್ರತಿಪಾದನೆ ಮಾಡುತ್ತಿದ್ದರು.
ಆಸ್ಪೃಶ್ಯತೆ ವಿರುದ್ಧ ಹೋರಾಟ, ಶ್ರೀ ಮಠದಲ್ಲಿ ಇಫ್ತಾರ್ ಕೂಟ, ದಲಿತರ ಕೇರಿ ಪ್ರವೇಶ, ನಕ್ಸಲ್ ಪ್ರದೇಶದಲ್ಲಿ ಆರೋಗ್ಯ ಶಿಬಿರ ಆಯೋಜಿಸಿದ್ದರು. ಇದೇ ಕಾರಣಕ್ಕೆ ವಿಶ್ವೇಶತೀರ್ಥ ಶ್ರೀಪಾದರು ಸಾಮಾಜಿಕ. ಧಾರ್ಮಿಕ, ರಾಜಕೀಯ, ಬೌದ್ಧಿಕ ಕ್ಷೇತ್ರ ಸೇರಿದಂತೆ ಎಲ್ಲ ವರ್ಗದವರ ಪ್ರೀತಿಗೆ ಪಾತ್ರರಾಗಿದ್ದರು. ಸರಳ ಸಜ್ಜನಿಕೆಯೇ ಭಕ್ತ ಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.
* ಎಸ್. ಲಕ್ಷ್ಮಿನಾರಾಯಣ