Advertisement
ಉಡುಪಿ ಶ್ರೀಕೃಷ್ಣಮಠದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯೋತ್ಸವ ಜ. 18ರಂದು ನಡೆಯುತ್ತಿದ್ದು ಈ ಪದ್ಧತಿ 501ನೆಯ ವರ್ಷಕ್ಕೆ ಪಾದಾರ್ಪಣೆಯಾಗುತ್ತಿದೆ.
Advertisement
ಯಾವುದೇ ಪ್ರಚಾರಕ್ಕೆ, ಲೌಕಿಕ ಜಂಜಡಗಳಿಗೆ ಸಿಲುಕದೆ ಅಂತರಂಗದ ಸಾಧಕರಾಗಿದ್ದವರು ಶ್ರೀ ವಿಶ್ವೋತ್ತಮ ತೀರ್ಥರು. 1934ರಲ್ಲಿ ಜನಿಸಿದ ಮಾಧವ 1943ರಲ್ಲಿ ಗುರುಗಳಿಂದ ಸನ್ಯಾಸಾಶ್ರಮ ಸ್ವೀಕರಿಸಿ ಏಕಾಂತಪ್ರಿಯರಾಗಿ ತಾಳೆಗರಿ ಗ್ರಂಥಾಧ್ಯಯನದಲ್ಲಿ ತೊಡಗುತ್ತಿದ್ದರು. ಹೆಚ್ಚಿಗೆ ಇರುತ್ತಿದ್ದುದು ಜನಜಂಗುಳಿಯಿಂದ ದೂರವಿರುವಲ್ಲಿ. ಅವರ ಸಾಧನೆಗೆ ವೈಜ್ಞಾನಿಕ ಪುರಾವೆ ಕೊಡುವುದು ಕಷ್ಟ. ಉದಾಹರಣೆಗೆ ಬದರಿ ಕ್ಷೇತ್ರದಿಂದ ಎತ್ತರದಲ್ಲಿರುವ ವಸುಧಾರಾ ಕ್ಷೇತ್ರಕ್ಕೆ ವಯಸ್ಸಾದವರನ್ನು ಬುಟ್ಟಿಯಲ್ಲಿ ಹೊತ್ತು ಹೋಗುತ್ತಾರೆ. ಶ್ರೀಗಳೂ ಒಮ್ಮೆ ಹೀಗೆ ಹೋಗಿದ್ದರು. ಹೊತ್ತ ಬುಟ್ಟಿ ಇಳಿಸಿದ ಬಳಿಕ ಹೊತ್ತವ ಭಾರವೇ ಆಗಲಿಲ್ಲ ಎಂದು ಕಾಲಿಗೆರಗಿದ.
ಉಡುಪಿಯಿಂದ ಮೈಸೂರಿಗೆ ಹೋಗುವಾಗ ಸುಬ್ರಹ್ಮಣ್ಯ ಘಾಟಿ ಪ್ರದೇಶದಲ್ಲಿ ಕೆಲವು ನಿಮಿಷ ವಾಹನ ನಿಲ್ಲಿಸಿ ಮೌನದಿಂದಿರುತ್ತಿದ್ದರು. ಸೋದೆ ಮಠಕ್ಕೂ ಸುಬ್ರಹ್ಮಣ್ಯ ಮಠಕ್ಕೂ ಮೂಲ ಯತಿಗಳಾದ ಶ್ರೀ ವಿಷ್ಣುತೀರ್ಥರ ಜತೆ ಸಂವಹನದ ಚಿಂತನೆ ಅದು. ಇದಕ್ಕೆ ಪುರಾವೆ ಕೊಡಲು ಸಾಧ್ಯವೆ? ಹೊಳೆಹೊನ್ನೂರಿನ ಉತ್ತರಾದಿ ಮಠದ ಶ್ರೀ ಸತ್ಯಧರ್ಮತೀರ್ಥರ ವೃಂದಾವನದಲ್ಲಿ ಸಂಜೆ ವೇಳೆ ಗಂಗೆಯನ್ನು ಪ್ರಾರ್ಥಿಸಿ (“ತೀರ್ಥಪ್ರಬಂಧ’ ದ ಗಂಗಾ ಷ್ಟಕ ಪಠಿಸಿ) ತರಿಸಿರುವುದನ್ನು ಕಂಡವರಿದ್ದಾರೆ.
2002ರ ಜೂ. 22ರ ಮುಂಜಾವ ಶ್ರೀಗಳಿಗೆ ವಿಷ್ಣುದೂತರು ಸ್ವಪ್ನದಲ್ಲಿ ಕಾಣಿಸಿ “ನೀವು ಬಂದ ಕಾರ್ಯವಾಯಿತು. ಇನ್ನು ಹೊರಡಬಹುದು’ ಎಂದಾಗ “ಸಿದ್ಧನಿದ್ದೇನೆ’ ಎಂದರು. ಕ್ಷಣ ಮೌನವಹಿಸಿ “ನೀವು ಮಹಾಭಾಗ್ಯಶಾಲಿಗಳು, ಇನ್ನೊಂದು ಕಾರ್ಯ ಉಂಟು (ಸೋಂದೆಯ ಸನ್ನಿಧಿ ತೋರಿಸಿ). ಇನ್ನೂ ಐದು ವರ್ಷ ರಾಜರ ಸೇವೆ ಮಾಡಿ’ ಎಂದರಂತೆ. ಶ್ರೀಗಳಿಗೆ ಎಚ್ಚರವಾಯಿತು. ವಿದ್ವಾಂಸ ಡಾ|ಜಿ.ಕೆ.ನಿಪ್ಪಾಣಿಯವರಿಗೆ ಗುಟ್ಟಾಗಿ ತಿಳಿಸಿದಾಗ ಅವರು ಚುಟುಕಾಗಿ ಬರೆದಿಟ್ಟುಕೊಂಡರು. 2006ರಲ್ಲಿ ಸೋದೆಯಲ್ಲಿ ಶಿಷ್ಯನನ್ನು ಸ್ವೀಕರಿಸಿದರು. ಆರೋಗ್ಯಪೂರ್ಣರಾಗಿದ್ದ ಶ್ರೀಪಾದರು ಸೋಂದೆಯಲ್ಲಿ ಎಲ್ಲ ನಿತ್ಯಕ್ರಮಗಳನ್ನು ಪೂರೈಸಿ, 300 ಭಕ್ತರಿಗೆ ಪ್ರಸಾದ ವಿತರಿಸಿ “ರಾಮ ರಾಮ ರಾಮ’ ಎನ್ನುತ್ತ 2007ರ ಆ. 18ರಂದು ನಿರ್ಯಾಣರಾದರು ಎಂದು ನಿಪ್ಪಾಣಿಯವರು ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಯಾರು ಏನೇ ಹೊಗಳಲಿ “ಅದು ವಾದಿರಾಜರು, ಭೂತರಾಜರ ಮಹಿಮೆ’ ಎಂದು ನಿರ್ಲಿಪ್ತರಾಗಿ ಹೇಳುತ್ತಿದ್ದುದು ಜೀವನದ ಕೊನೆಯಲ್ಲೂ ರುಜುವಾತಾಯಿತು.
ಅದಮಾರು ಮಠ ಶಿಕ್ಷಣ ಮಂಡಳಿ ಮೂಲಕ 1960ರಿಂದ ಒಂದೊಂದೇ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಶ್ರೀ ವಿಬುಧೇಶತೀರ್ಥರು “ಮಠಕ್ಕೆ 16,000 ಮುಡಿ ಹುಟ್ಟುವಳಿ ಇತ್ತು. ಈಗ 16,000 ವಿದ್ಯಾರ್ಥಿಗಳಿರುವುದೇ ಸಂಪತ್ತು’ ಎಂದು ಹೇಳುತ್ತಿದ್ದರು. ಹುಟ್ಟುವಳಿಯಾದರೂ ಪರಂಪರೆಯಿಂದ ಬಂದುದು, ಶಿಕ್ಷಣ ಸಂಸ್ಥೆಗಳು ಸ್ವಯಾರ್ಜಿತವಾದುದು. ಸನ್ಯಾಸಿಯಾದರೂ ಮೂಲವಿಜ್ಞಾನಕ್ಕೆ ಒತ್ತು ಕೊಡುತ್ತಿದ್ದರು. ಸಾಂಪ್ರದಾಯಿಕ ಮಠಾಧಿಪತಿಗಳಿಗೆ ಲೌಕಿಕ ಶಿಕ್ಷಣದ ಗೊಡವೆ ಏಕೆ ಎಂಬ ಆಕ್ಷೇಪವನ್ನು ಎದುರಿಸಿ ಕೊಡುಗೆ ನೀಡಿದರು. 1928ರಲ್ಲಿ ಪಾವಂಜೆಯಲ್ಲಿ ಜನಿಸಿ 1945ರಲ್ಲಿ ಶ್ರೀ ವಿಬುಧೇಶತೀರ್ಥರು ವಿದ್ಯಾರ್ಥಿ ದೆಸೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇರವಾಗಿ ಪಾಲ್ಗೊಂಡ ಏಕೈಕ ಯತಿ. 81ನೆಯ ವಯಸ್ಸಿನಲ್ಲಿ 2009ರ ಸೆ.15ರಂದು ಅಸ್ತಂಗತರಾದರು. ಅವರು ಆರಂಭಿಸಿದ 26 ಸಂಸ್ಥೆಗಳು ಈಗ 40ಕ್ಕೇರಿವೆೆ.
-ಮಟಪಾಡಿ ಕುಮಾರಸ್ವಾಮಿ