ಮಂಗಳೂರು: ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 201ನೇ ವರ್ಷದ ಮಂಗಳೂರು ರಥೋತ್ಸವ ಶ್ರದ್ಧಾ ಭಕ್ತಿಯಿಂದ ಸೋಮವಾರ ನೆರವೇರಿತು.
ಈ ಬಾರಿ 2 ಕೋಟಿ ರೂ. ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ನೂತನ ಬ್ರಹ್ಮರಥದಲ್ಲಿ ರಥೋತ್ಸವ ಜರಗಿದ್ದು, ದೇಶ ವಿದೇಶಗಳ ಸಹಸ್ರಾರು ಭಜಕರು ಪಾಲ್ಗೊಂಡಿದ್ದರು.
ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರಿಂದ ಬೆಳಗ್ಗೆ ಪ್ರಧಾನ ದೇವರಾದ ಶ್ರೀ ವೀರ ವೆಂಕಟೇಶ ದೇವರಿಗೆ ಶತ ಕಲಶಾಭಿಷೇಕ, ಪವಮಾನಾಭಿಷೇಕ, ಗಂಗಾಭಿಷೇಕ ನೆರವೇರಿದವು. ಸಂಜೆ ಶ್ರೀಗಳು ಯಜ್ಞದ ಮಹಾ ಪೂರ್ಣಾಹುತಿ ಮತ್ತು ರಥಾರೂಢ ಶ್ರೀ ವೀರ ವೆಂಕಟೇಶ ದೇವರಿಗೆ ಮಹಾ ಮಂಗಳಾರತಿ ನೆರವೇರಿಸಿದರು. ಬಳಿಕ ನೂತನ ಬ್ರಹ್ಮರಥವನ್ನು ಎಳೆಯಲಾಯಿತು.
ಇದನ್ನೂ ಓದಿ:ಜೆಎನ್‌ಯುಗೆ ಶಾಂತಿ ಪಂಡಿತ್ ಕುಲಪತಿ; ಇದೇ ಮೊದಲ ಬಾರಿಗೆ ಮಹಿಳಾ ಕುಲಪತಿ ನೇಮಕ
ಮೊಕ್ತೇಸರರಾದ ಸಿ.ಎಲ್. ಶೆಣೈ, ಪ್ರಶಾಂತ್ ರಾವ್, ರಾಮಚಂದ್ರ ಕಾಮತ್, ದಾನಿ ಪಿ. ದಯಾನಂದ ಪೈ, ಮುಂಡ್ಕೂರ್ ರಾಮದಾಸ್ ಕಾಮತ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು.