ಉಡುಪಿ: ನಮ್ಮ ಸದ್ಗುಣ ವರ, ದುರ್ಗುಣ ಶಾಪವಾಗುತ್ತದೆ. ಬದುಕು ಮಾತ್ರ ಪ್ರಸ್ತುತವಾಗಿದ್ದು, ನಮ್ಮ ಧಾರ್ಮಿಕ ಕಾರ್ಯಗಳು ದುರ್ಗುಣಗಳಿಂದ ಜಾಗೃತರನ್ನಾಗಿಸಿ, ಭಾವನೆಗಳನ್ನು ಪವಿತ್ರಗೊಳಿಸುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ನವೀಕೃತ ನಾಗದೇವರ ಗುಡಿ ಸಮರ್ಪಣ ಪೂರ್ವಕ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಬದುಕಿನಲ್ಲಿ ಹಸಿವು, ಸಾವು, ಮರೆವು ತುಂಬ ಮಹತ್ವದ ಸಂಗತಿಗಳು. ಇವು ದೇವರು ನೀಡಿದ ಶಾಪವಲ್ಲ, ವರಗಳಾಗಿವೆ. ಇದೆಲ್ಲವೂ ಇಲ್ಲದಿರುತ್ತಿದ್ದರೆ ಬದುಕಿಗೊಂದು ಏಳಿಗೆಯೂ ಇರುತ್ತಿರಲಿಲ್ಲ, ಅರ್ಥವೂ ಇರುವುದಿಲ್ಲ. ಧಾರ್ಮಿಕ ಪ್ರಜ್ಞೆ, ಆಚರಣೆಗಳು ಬದುಕಿನಲ್ಲಿ ಶಾಂತಿ ಸಿಗಲು ಕಾರಣವಾಗುತ್ತಿದೆ. ಸೃಷ್ಟಿಯ ಲಯದಲ್ಲಿ ನಾಗದೇವರು ಅತ್ಯಂತ ವಿಶಿಷ್ಟ, ನಾಡಿನ ಸುಭಿಕ್ಷೆಗೆ ಶ್ರೀನಾಗ ದೇವರ ಆಶೀರ್ವಾದ ಇರಲಿ ಎಂದು ಆಶಿಸಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಧರ್ಮ ಎಂದರೆ ಆಶ್ರಯ. ಆಧಾರ ಉತ್ತಮ ವಿಚಾರಗಳೊಂದಿಗೆ ಸಮಾಜವನ್ನು ಕಟ್ಟಬೇಕು. ಪ್ರಕೃತಿಯು ಭಗವಂತನ ಆರಾಧನೆಯ ಪ್ರತೀಕ ವಾಗಿದೆ. ಸಾಮಾಜಿಕ ಗೊಂದಲಗಳು ದೂರವಾಗಿ ಎಲ್ಲರ ಬದುಕಿನಲ್ಲಿಯೂ ಶಾಂತಿ ನೆಲೆಸಲಿ ಎಂದು ಹಾರೈಸಿದರು.
ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಲಾಲಾಜಿ ಆರ್. ಮೆಂಡನ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಎಸ್. ನಾಯಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ, ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಎಂ.ಎಸ್. ಮಹಾಬಲೇಶ್ವರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸಾಮಾಜಿಕ ಮುಖಂಡ ಹರಿಕೃಷ್ಣ ಪುನರೂರು, ಉದ್ಯಮಿಗಳಾ ದ ವೀರೇಂದ್ರ ಹೆಗ್ಡೆ, ಸತೀಶ್ ವಿ. ಶೆಟ್ಟಿ, ದೇವಸ್ಥಾನದ ಮುಖ್ಯ ಸ್ಥ ಸಗ್ರಿ ಗೋಪಾಲಕೃಷ್ಣ ಸಾಮಗ, ಸಗ್ರಿಹರಿನಾರಾಯಣ ಭಟ್, ಸುಬ್ರಹ್ಮಣ್ಯ ಭಟ್, ಮೋಹನ್ ಭಟ್ ಇದ್ದರು. ಡಾ| ಸಗ್ರಿ ಆನಂದ ತೀರ್ಥ ಪ್ರಸ್ತಾವನೆ ಗೈದರು. ಗೋಪಾಲ ಜೋಯಿಸ್ ವಂದಿಸಿದರು. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು.