Advertisement
ಈ ಕುಂಭಾಸಿ ಕ್ಷೇತ್ರದಿಂದ ಸುಮಾರು 5 ಮೈಲು ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಹೂವಿನಕೆರೆ ಎಂಬ ಗ್ರಾಮದಲ್ಲಿ ಸಾತ್ವಿಕರಾದ ರಾಮಾಚಾರ್ಯ ಮತ್ತು ಸರಸ್ವತಿ ಎಂಬ ಸಾಮ ಶಾಖೆಯ ದಂಪತಿ ಇದ್ದರು. ಸಂತಾನ ಭಾಗ್ಯವಿಲ್ಲದ ಈ ದಂಪತಿ ಶ್ರೀ ವಾಗೀಶತೀರ್ಥರನ್ನು ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸಿದರು. ತಮ್ಮ ಉಪಾಸ್ಯಮೂರ್ತಿಯಾದ ಭೂವರಾಹ ದೇವರ ಸ್ವಪ್ನ ಸೂಚನೆಯಂತೆ ಶ್ರೀ ವಾಗೀಶತೀರ್ಥರು ಫಲ ಮಂತ್ರಾಕ್ಷತೆಯನ್ನು ನೀಡಿದರು. ಮನೆಯ ಹೊರಗೆ ಪ್ರಸವವಾದಲ್ಲಿ ಸಂಸ್ಥಾನಕ್ಕೆ ಮಗು ವನ್ನು ನೀಡಬೇಕೆಂದು, ಮನೆಯ ಒಳಗೆ ಪ್ರಸವವಾದಲ್ಲಿ ಮಗು ವನ್ನು ನೀವೇ ಇಟ್ಟುಕೊಳ್ಳಬಹುದೆಂದು ನಿಯಮ ವಿಧಿಸಿದರು.
Related Articles
Advertisement
ರುಕ್ಮಿಣೀಶ ವಿಜಯ ಎಂಬ 19 ಸರ್ಗಗಳಿರುವ ಮಹಾಕಾವ್ಯವನ್ನು ರಚಿಸಿದಾಗ ಪೂನಾದ ದೊರೆ ಅದನ್ನು ಆನೆಯ ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಿ ವಾದಿರಾಜರನ್ನು ಕೊಂಡಾಡಿದ. ದಿಲ್ಲಿ, ಪ್ರಯಾಗ, ದ್ವಾರಕೆ, ಹಂಪಿ, ಮೂಡುಬಿದಿರೆಯಲ್ಲಿ ವಾದಿರಾಜರು ಮೆರೆದ ಪವಾಡ ಇತಿಹಾಸ ದಲ್ಲಿ ದಾಖಲಿಸಲ್ಪಟ್ಟಿದೆ.
ದೈವಜ್ಞ ಸಮಾಜದವರನ್ನು, ಕೋಟೇ ಶ್ವರ ಮಾಗಣೆಯವರನ್ನು ತಪ್ತ ಮುದ್ರಾಧಾರಣೆಯೊಂದಿಗೆ ತಮ್ಮ ಶಿಷ್ಯರಾಗಿ ಸ್ವೀಕರಿಸಿ ಉದ್ಧರಿಸಿದರು. ಎರಡು ತಿಂಗಳ ಉಡುಪಿಯ ಶ್ರೀ ಕೃಷ್ಣನ ಪರ್ಯಾಯ ಪದ್ಧತಿಯನ್ನು ಎರಡು ವರ್ಷಕ್ಕೆ ವಿಸ್ತರಿಸಿ, ಅಷ್ಟ ಮಠಾಧೀಶರಿಗೂ ಪ್ರತ್ಯೇಕ ಮಠವನ್ನು ನಿರ್ಮಿಸಿ, ಕೃಷ್ಣ ಪೂಜಾ ಪದ್ಧತಿಯಲ್ಲಿ ಮಹಾಕ್ರಾಂತಿಯನ್ನೇ ಮಾಡಿದರು.
ಅಪರೋಕ್ಷ ಜ್ಞಾನಿಗಳಾದ ವಾದಿರಾಜರು ಹಯಗ್ರೀವ ಭಕ್ಷéವನ್ನು ಹರಿವಾಣದಲ್ಲಿ ತಲೆಯ ಮೇಲಿಟ್ಟು “ಆವ ಕಡೆಯಿಂದ ಬಂದೆ ವಾಜಿವದನನೆ| ಭಾವಿಸುತ ವಾದಿರಾಜ ಮುನಿಯ ಕಾಣುತ…’ ಎನ್ನುವುದಾಗಿ ಪ್ರಾರ್ಥಿಸಿದಾಗ ಸಾಕ್ಷಾತ್ ಶ್ರೀಹರಿಯೇ ಹಯಗ್ರೀವನಾಗಿ ತನ್ನ ಮುಂಗಾಲುಗಳನ್ನು ಅವರ ಹೆಗಲಿನಲ್ಲಿಟ್ಟು ನೈವೇದ್ಯವನ್ನು ಸ್ವೀಕರಿಸುತ್ತಿದ್ದ.
ಮುಂದೆ ಸೋದೆಯ ಅರಸನನ್ನು ಶತ್ರುಗಳಿಂದ ರಕ್ಷಿಸಿದಾಗ ಆತ ವಾದಿರಾಜರ ಶಿಷ್ಯರಾಗಿ ಮುತ್ತಿನ ಸಿಂಹಾಸನ, ಛತ್ರ, ಚಾಮರ ಹಾಗೂ 18 ರಾಜ ಬಿರುದುಗಳನ್ನು ವಾದಿರಾಜರಿಗೆ ಸಮರ್ಪಿಸಿದ. ಸೋದೆಯಲ್ಲಿ ರಮಾತ್ರಿವಿಕ್ರಮ ಗುಡಿಯನ್ನು ಸ್ಥಾಪಿಸಿ, ಅಲ್ಲಿಯೇ ತಮ್ಮ 5ನೇ ಪರ್ಯಾಯವನ್ನು ನೆರವೇರಿಸಿದರು.
ಉಡುಪಿಯ ಶ್ರೀಕೃಷ್ಣನಿಗೆ ದ್ವೈವಾರ್ಷಿಕ ವಿಧಿಯಂತೆ ನಾಲ್ಕು ಬಾರಿ ಪರ್ಯಾಯ ಪೂಜೆ ಮಾಡಿ ಐದನೇ ಪೂಜೆಯನ್ನು ವೇದವೇದ್ಯತೀರ್ಥರಿಗೆ ವಹಿಸಿದರು. ಅನೇಕ ಕೃತಿಗಳನ್ನು ಮುಖ್ಯವಾಗಿ ಸಂಸ್ಕೃತದಲ್ಲಿ ತೀರ್ಥ ಪ್ರಬಂಧ, ರುಕ್ಮಿಣೀಶ ವಿಜಯ, ಯುಕ್ತಿಮುಲ್ಲಿಕಾ, ಸರಸಭಾರತಿ ವಿಲಾಸ, ಭ್ರಮರ ಗೀತೆ, ಹಯವದನ ನಾಮಾಂಕಿತವಾದ ಅನೇಕ ಕೀರ್ತನೆಗಳನ್ನು ರಚಿಸಿದರು. ಹೀಗೆ ವ್ಯಾಸ ಹಾಗೂ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕ್ರಿ.ಶ. 1600ನೇ ಶಾರ್ವರೀ ಸಂವತ್ಸರದ ಫಾಲ್ಗುಣ ಮಾಸ ಕೃಷ್ಣ ಪಕ್ಷ ತದಿಗೆಯಂದು ಸಶರೀರವಾಗಿ ವೃಂದಾವನವನ್ನು ಪ್ರವೇಶ ಮಾಡಿದರು.
ಭಕ್ತಜನರ ನಂಬುಗೆಯಂತೆ ಶ್ರೀ ವಾದಿರಾಜರು ಲಾತವ್ಯವೆನ್ನುವ ಬ್ರಹ್ಮಪದವಿಗೆ ಯೋಗ್ಯರಾದ ಋಜುಗಳ ಅವತಾರ. ಅಂತೆಯೇ ದಾಸವರೇಣ್ಯರು ಶ್ರೀವಾದಿರಾಜರನ್ನು ಭಾವೀಸಮೀರ ಎನ್ನುವುದಾಗಿಯೇ ವರ್ಣಿಸಿ
ದ್ದಾರೆ. ಶ್ರೀ ವಾದಿರಾಜರು ಅವತರಿಸಿದ ಹೂವಿನಕರೆಯ ಗೌರಿಗದ್ದೆ ಸಮೀಪದಲ್ಲಿ ಅವರ ಮೂರ್ತಿಯು ಪೂಜೆಗೊಳ್ಳುತ್ತಿದೆ.
-ಕೆ. ಶ್ರೀಪತಿ ಉಪಾಧ್ಯಾಯ, ಕುಂಭಾಸಿ