Advertisement

ಬಲವಂತದ ಧರ್ಮಾಚರಣೆ ಸಲ್ಲ: ಸುಬುಧೇಂದ್ರ ಶ್ರೀ

11:37 PM Aug 14, 2022 | Team Udayavani |

ರಾಯಚೂರು: ಒಬ್ಬರಿಂದ ಒತ್ತಾಯಪೂರಕವಾಗಿ ಧರ್ಮಾಚರಣೆ ಮಾಡಿಸುವುದು ಸರಿಯಲ್ಲ. ಇನ್ನೊಬ್ಬರ ಧರ್ಮದ ಬಗ್ಗೆ ಅಗೌರವ ತೋರಿಸದೇ ನಮ್ಮ ಧರ್ಮ ಆಚರಿಸಬೇಕು. ಇದನ್ನು ಎಲ್ಲರೂ ಅರ್ಥೈಸಿಕೊಂಡು ಸೌಹಾರ್ದವಾಗಿ ಬಾಳಬೇಕು ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

Advertisement

ಮಂತ್ರಾಲಯದಲ್ಲಿ ಭಾನುವಾರ ಶ್ರೀ ರಾಘವೇಂದ್ರ ಸ್ವಾಮಿಗಳವರ 351ನೇ ಉತ್ತರಾರಾಧನೆ ನಿಮಿತ್ತ ಶ್ರೀ ಪ್ರಹ್ಲಾದರಾಜರ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ನಾವೆಲ್ಲ ಹಿಂದೂಗಳು. ಸನಾತನ ಭಾರತೀಯ ಹಿಂದೂ ಸಂಸ್ಕೃತಿ ಆಚರಿಸಬೇಕು. ಅವರವರಿಗೆ ಅವರ ಧರ್ಮವೇ ಶ್ರೇಷ್ಠ. ದೇಶದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲಿ. ಪ್ರತಿಯೊಬ್ಬರೂ ಜಾತಿ, ಕೋಮು ಸಂಘರ್ಷಗಳಿಗೆ ಆಸ್ಪದ ನೀಡದೇ ಸೌಹಾರ್ದತೆಯಿಂದ ಜೀವನ ನಡೆಸಬೇಕು. ಭಕ್ತರು ಬೇಡಿದ ವರಗಳನ್ನು ನೀಡುವ ಕರುಣಾಮಯಿ ಶ್ರೀ ರಾಘವೇಂದ್ರ ಸ್ವಾಮಿಗಳು. ವಿಶ್ವದ ಮೂಲೆ ಮೂಲೆಗಳಲ್ಲಿ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ಶ್ರೀ ಗುರುರಾಯರು ಪರಿಹರಿಸಿದ್ದಾರೆ. ಅದಕ್ಕೆ ಭಕ್ತರ ಅನುಭವಗಳೇ ಸಾಕ್ಷಿ. ಇದೇ ಕಾರಣಕ್ಕೆ ರಾಯರು ವಿಶ್ವಗುರುವಾಗಿದ್ದಾರೆ. ಶ್ರೀರಾಯರು ಬೃಂದಾನವಸ್ಥರಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ. ಇಂಥ ಗುರುಗಳ ಅನುಗ್ರಹ ಎಲ್ಲರಿಗೂ ಸಿಗುವಂತಾಗಲಿ ಎಂದರು.

ಕೋವಿಡ್‌ ಸಂಕಷ್ಟದಿಂದ ಎರಡು ವರ್ಷ ಆರಾಧನಾ ಮಹೋತ್ಸವ ಸರಳವಾಗಿ ಆಚರಣೆ ಮಾಡಲಾಗಿತ್ತು. ಈಗ ಮತ್ತೆ ಪರಿಸ್ಥಿತಿ ಸುಧಾರಿಸಿದ್ದು, ಮೊದಲಿನ ವೈಭವದಲ್ಲಿ ರಾಯರ ಆರಾಧನೆ ನಡೆದಿದೆ. ಮತ್ತೆ ಇಂಥ ಸಂಕಷ್ಟದ ದಿನಗಳು ಬಾರದಿರಲಿ ಎಂದು ಎಲ್ಲರೂ ಹಾರೈಸೋಣ. ಶ್ರೀಮಠದ ಮುಂದಿನ ಮಧ್ವಮಾರ್ಗದ ಕೆಲಸ ಶೇ.40ರಷ್ಟು ಮಾತ್ರ ಮುಗಿದಿದೆ. ಈಗ ಸಾಂಕೇತಿಕವಾಗಿ ಉದ್ಘಾಟನೆ ಮಾಡಿದ್ದು, ಅದು ಮುಗಿದ ಮೇಲೆ ನೋಡುವ ಸೊಬಗು ಇನ್ನೂ ಅದ್ದೂರಿಯಾಗಿರಲಿದೆ. ಸನಾತನ ಹಿಂದೂ ಧರ್ಮದ ಪ್ರಚಾರಕ್ಕಾಗಿ ಮ್ಯೂಸಿಯಂ ಎರಡನೇ ಕಟ್ಟಡ ನಿರ್ಮಿಸಲಾಗಿದೆ. ಶ್ರೀಮಠದಿಂದ ಕಾಶಿ, ಪ್ರಯಾಗ, ಅಯೋಧ್ಯೆಯಂಥ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪೀಠಾಧಿಪತಿಗಳಾಗಿ 10 ವರ್ಷ ಮುಗಿಸುತ್ತಿರುವ ಕಾರಣ ಸೆ.5ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವೇಳೆ ರಾಯರಿಗೆ ಸಮರ್ಪಿಸಿದ ರಜತ ವಸ್ತುಗಳನ್ನು ವಿದ್ವಾಂಸರು, ಪಂಡಿತರು, ಸಂಶೋಧಕರಿಗೆ ಪ್ರದಾನ ಮಾಡಲಾಗುವುದು. ಶ್ರೀಮಠದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಎರಡು ಸಾವಿರ ವೇತನ ಹೆಚ್ಚಳ ಮಾಡುವ ಮೂಲಕ ಸುಮಾರು 1.75 ಕೋಟಿ ಶ್ರೀಮಠಕ್ಕೆ ವೇತನದ ವೆಚ್ಚವಾಗಲಿದೆ. ಸಾಲುಮರದ ತಿಮ್ಮಕ್ಕನ ಅಮೃತಹಸ್ತದಿಂದ ಮಂತ್ರಾಲಯದಲ್ಲಿ ಸಸಿ ನೆಡುವ ಮೂಲಕ ಹಸರೀಕರಣಗೊಳಿಸಲಾಗುವುದು ಎಂದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದಿದ್ದು, ಎಲ್ಲೆಡೆ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಎಲ್ಲರೂ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ದೇಶದ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ರಧಾನಿ ಮೋದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗಲಿ.
– ಶ್ರೀ ಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠದ ಪೀಠಾಧಿಪತಿ

Advertisement

Udayavani is now on Telegram. Click here to join our channel and stay updated with the latest news.

Next