ಬೆಂಗಳೂರು: ಕೊಳದ ಮಠದ ಶ್ರೀ ಶಾಂತವೀರಸ್ವಾಮೀಜಿ ಶನಿವಾರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.
ಶುಕ್ರವಾರ ಸಂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶ್ರೀಗಳು ಕ್ಷೇಮವಾಗಿಯೇ ಇದ್ದರು, ರಾತ್ರಿ ಹೃದಯಾಘಾತದಿಂದ ವಿಧಿ ವಶವಾಗಿದ್ದಾರೆ, ಈ ವಿಚಾರ ಶನಿವಾರ ಬೆಳಗ್ಗೆ ತಿಳಿದಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಬೆಂಗಳೂರಿನ ಕೊಳದಮಠದ ಪರಮಪೂಜ್ಯ ಶ್ರೀ ಶಾಂತವೀರ ಸ್ವಾಮೀಜಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖಿತನಾಗಿದ್ದೇನೆ. ಧರ್ಮ ಜಾಗೃತಿ, ಸಮಾಜ ಸಧಾರಣೆಯಲ್ಲಿ ನಿರತರಾಗಿದ್ದ ಶ್ರೀಗಳ ಅಗಲಿಕೆಯಿಂದ ಸಮಾಜಕ್ಕೆ ಅಪಾರ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಶ್ರೀಗಳ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸಂತಾಪ ಸೂಚಿಸಿ, ಸ್ವಾಮೀಜಿಯವರು ಸಮಾಜ ಸುಧಾರಣೆ ಮತ್ತು ಧಾರ್ಮಿಕ ಜಾಗೃತಿಯಲ್ಲಿ ತೊಡಗಿದ್ದರು. ಮೃತರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ. ದುಃಖತಪ್ತ ಮಠದ ಶಿಷ್ಯವರ್ಗಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಕೊಳದಮಠದ ಪೀಠಾಧ್ಯಕ್ಷರು, ಪರಮಪೂಜ್ಯ ಶ್ರೀ ಶಾಂತವೀರ ಮಹಾಸ್ವಾಮೀಜಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ಬಹಳ ದುಃಖವಾಯಿತು. ಸಮಾಜ ಸುಧಾರಣೆಯಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದ ಶ್ರೀಗಳ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಶ್ರೀ ಶಾಂತವೀರ ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ಕೇಳಿ ತೀವ್ರ ನೋವಾಗಿದೆ. ಸಮಾಜ ಸುಧಾರಣೆ ಹಾಗೂ ಧರ್ಮ ಜಾಗೃತಿ ವಿಚಾರದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದ ಸ್ವಾಮೀಜಿ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಜನರ ಧ್ವನಿಯಾಗಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.