ಮಂಗಳೂರು: ಅಮೆರಿಕ ಸಹಿತ ನಮ್ಮ ನೆರೆ ರಾಷ್ಟ್ರ ಗಳು ನಮ್ಮೊಳಗಿನ ಒಗ್ಗಟ್ಟನ್ನು ಒಡೆಯಲು ಕಾಯುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ಪರಸ್ಪರ ದ್ವೇಷ ಸಾಧಿಸದೆ, ದೇಶ ಪ್ರೇಮವನ್ನು ಜಾಗೃತಗೊಳಿಸಿ, ಸಹಬಾಳ್ವೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಶ್ರೀ ಬಾರ್ಕೂರು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತಿ ಸ್ವಾಮೀಜಿ ಹೇಳಿದರು.
ಯುನಿವೆಫ್ ಕರ್ನಾಟಕದ ವತಿಯಿಂದ ಅ. 6ರಿಂದ ಡಿ. 22ರ ವರೆಗೆ “ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿದ್ದ “ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದಂಗವಾಗಿ ಪುರಭವನ ದಲ್ಲಿ ನಡೆದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಬಲ್ಮಠ ಕರ್ನಾಟಕ ಥಿಯೋಲೋಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ| ಎಚ್.ಎಂ. ವಾಟ್ಸನ್ ಮಾತನಾಡಿ, ಇಂದು ಧರ್ಮದ ನೆಲೆಯಲ್ಲಿ ವ್ಯಕ್ತಿಯ ಅಸ್ಮಿತೆಯನ್ನು ಪ್ರಶ್ನಿಸುವ ಕಾಲ. ದೇವರು ನಮ್ಮನ್ನು ಕಾಯುತ್ತಾರೆ ಎನ್ನುವುದನ್ನು ಮರೆತು, ನಾವೇ ಕಾಯುವವರು ಎನ್ನುವ ಪರಿಸ್ಥಿತಿಗೆ ಬಂದಿದ್ದೇವೆ. ಇಂತಹ ವ್ಯವಸ್ಥೆಯಿಂದ ಹೊರಬರಬೇಕಾದ ಅಗತ್ಯವಿದೆ ಎಂದರು.
ಯುನಿವೆಫ್ ಪ್ರಧಾನ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಸ್ತಾವನೆಗೈದರು.
ಅಧ್ಯಕ್ಷತೆ ವಹಿಸಿದ್ದ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಸಮಾರೋಪ ಭಾಷಣ ಮಾಡಿದರು. ಅಭಿಯಾನದ ಸಹ ಸಂಚಾಲಕರಾದ ಆಸೀಫ್ ಕುದ್ರೋಳಿ ಮತ್ತು ಉಬೈದುಲ್ಲಾ ಬಂಟ್ವಾಳ ಹಾಗೂ ಯುನಿವೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಬಿ.ಎಂ. ಬದ್ರುದ್ದೀನ್ ಉಪಸ್ಥಿತರಿದ್ದರು.
ಯುನಿವೆಫ್ ಉಳ್ಳಾಲ ಶಾಖೆಯ ಕಾರ್ಯದರ್ಶಿ ಉಮರ್ ಮುಕ್ತಾರ್ ಕಿರಾಅತ್ ಪಠಿಸಿದರು. ಅಭಿಯಾನದ ಸಂಚಾಲಕ ಸೈಫುದ್ದೀನ್ ಕುದ್ರೋಳಿ ಸ್ವಾಗತಿಸಿದರು. ಹುದೈಫ್ ಕುದ್ರೋಳಿ ಮತ್ತು ಫಝಲ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.