Advertisement

Ayodhya: ಶ್ರೀರಾಮ ಪ್ರಾಣ ಪ್ರತಿಷ್ಠೆ: ಅಭಿಷೇಕಕ್ಕೆ ಕಾವೇರಿ ತೀರ್ಥ

01:00 AM Jan 12, 2024 | Team Udayavani |

ಮಂಗಳೂರು: ಅಯೋಧ್ಯೆ ಶ್ರೀರಾಮ ಕ್ಷೇತ್ರ ಪ್ರಾಣಪ್ರತಿಷ್ಠೆಯು ಜ. 22ರಂದು ನಡೆಯಲಿದ್ದು, ಅದರ ಸಮಾರೋಪದಂದು ಅಭಿಷೇಕ ಮಾಡಲು ಕಾವೇರಿ ಪವಿತ್ರ ತೀರ್ಥವನ್ನು ಕರ್ನಾಟಕದಿಂದ ಅಯೋಧ್ಯೆಗೆ ಕೊಂಡೊಯ್ಯಲಾಗುವುದು. ಕರ್ನಾಟಕ ಅಖೀಲ ಭಾರತೀಯ ಸಂತ ಸಮಿತಿಯಿಂದ ಈ ಕಾರ್ಯ ನೆರವೇರಲಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ, ಮಂಗಳೂರು ಓಂ ಶ್ರೀ ಮಠಾಧೀಶ ಶ್ರೀ ವಿದ್ಯಾನಂದ ಸರಸ್ವತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಈಗಾಗಲೇ ಕಾವೇರಿ ಪವಿತ್ರ ತೀರ್ಥವನ್ನು ಜ. 6ರಂದು ತಲಕಾವೇರಿಯಲ್ಲಿ ವಿಧಿ ಪ್ರಕಾರ ಶೇಖರಣೆ ಮಾಡಿ, ವಿಶೇಷ ಪೂಜೆ, ಹವನ ಸಲ್ಲಿಸಲಾಗಿದೆ. ಬಳಿಕ ಮೈಸೂರಿನಲ್ಲಿರುವ ವಿವಿಧ ಮಠಗಳಲ್ಲಿ ವಿಶೇಷ ಸ್ವೀಕರಣಾ ಪೂಜೆ ಸಲ್ಲಿಸಿ, ಬೆಂಗಳೂರು ಕೈಲಾಸ ಆಶ್ರಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಜ. 10ರಂದು ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನಾ ಅನುಗ್ರಹವನ್ನು ನೀಡಿದ್ದಾರೆ. ಅದೇ ದಿನ ಸಂಜೆ ಮಂಗಳೂರು ಓಂ ಶ್ರೀ ಮಠದಲ್ಲಿ ವಿಶೇಷ ಪೂಜಾದಿಗಳನ್ನು ನೆರವೇರಿಸಲಾಗಿದೆ ಎಂದರು.

ಜ. 12ರಂದು ಮಂಗಳೂರು ಓಂ ಶ್ರೀ ಮಠದ ಮೂಲ ಕ್ಷೇತ್ರವಾದ ಶ್ರೀಶೈಲಂ ದೇವಿ ಕ್ಷೇತ್ರದಲ್ಲಿ ಹಾಗೂ ಮೂಲಮಠದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುವುದು. ಸಂಜೆ 6 ಗಂಟೆಯಿಂದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಅವರ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾವೇರಿ ತೀರ್ಥ ಕಲಶ ಕುಂಭಕ್ಕೆ ವಿಶೇಷ ಪೂಜಾದಿಗಳು ನಡೆಯಲಿವೆ ಎಂದರು.

ಜ. 18ಕ್ಕೆ ಅಯೋಧ್ಯೆಗೆ ಕೊಂಡೊಯ್ಯುವ ಕಾವೇರಿ ತೀರ್ಥ ಕಳಶ ಕುಂಭಕ್ಕೆ ಜ. 13ರಿಂದ 18ರ ವರೆಗೆ ಮಂಗಳೂರು ಓಂ ಶ್ರೀ ಮಠದಲ್ಲಿ ವಿಶೇಷ ಪೂಜಾದಿಗಳು ನಡೆಯಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಬಳಿಕ ಅಯೋಧ್ಯೆಗೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.

ಸಂತ ಸಮಿತಿ ಸಹ ಅಧ್ಯಕ್ಷೆ, ಓಂ ಶ್ರೀ ಮಠದ ಮಾತಾಶ್ರೀ ಶಿವ ಜ್ಞಾನಮಹಿ ಸರಸ್ವತಿ, ಕೋಶಾಧಿಕಾರಿ ಕಾಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಮುಖ್ಯ ಕಾರ್ಯದರ್ಶಿ ಉಡುಪಿಯ ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್‌ ಗುರೂಜಿ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next