Advertisement

ನಿತ್ಯ ಯೋಗಾಭ್ಯಾಸಿ ಪಲಿಮಾರು ಸ್ವಾಮೀಜಿ

06:00 AM Jun 21, 2018 | Team Udayavani |

ಉಡುಪಿ: ಯೋಗ ಎಂಬುದು ನಿತ್ಯಾಭ್ಯಾಸವೇ ಹೊರತು ಒಂದು ದಿನದ ಲೆಕ್ಕಾಚಾರವಲ್ಲ. ಯೋಗದಿಂದ ಆರೋಗ್ಯವೆಂದು ನಂಬಿ ಅಭ್ಯಾಸಕ್ಕೆ ತೊಡಗುವವರಿಗೆಲ್ಲಾ ಸಾಮಾನ್ಯವಾಗಿ ಯೋಗಗುರುಗಳು ಹೇಳುವ ಮೊದಲು ಮಾತಿದು. ನಿತ್ಯವೂ ಯೋಗಕ್ಕೆ ನೀಡುವ ಸಮಯ ಸ್ವಲ್ಪ ಕಡಿಮೆ ಆಗಬಹುದು, ಆದರೆ ಅಭ್ಯಾಸ ಬಿಡಬಾರದು ಎಂಬುದು ಸ್ಪಷ್ಟವಾದ ಅಭಿಪ್ರಾಯ.

Advertisement

ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದರಿಗೀಗ ವಯಸ್ಸು 63. ಆದರೆ ಯುವ ತೇಜಸ್ಸಿನಿಂದ ಕಂಗೊಳಿಸುವುದಕ್ಕೆ ಯೋಗ, ಪ್ರಾಣಾಯಾಮದ ನಿತ್ಯ ಅಭ್ಯಾಸವೇ ಕಾರಣ. ಬಹಳ ಚಿಕ್ಕ ಪ್ರಾಯದಲ್ಲೇ ಕೊಡಚಾದ್ರಿಗೆ ತಪಸ್ಸಿಗೆಂದು ತೆರಳಿದ ವರು ಶ್ರೀಗಳು. ಹಾಗೆ ತೆರಳಿದವರಿಗೆ ಪಲಿಮಾರು ಮಠದ ಆಧಿಪತ್ಯ ದೊರಕಿ ದಶಕಗಳು ಕಳೆದಿವೆ. ಹಾಗೆಯೇ ಅವರ ಯೋಗಾಭ್ಯಾಸಕ್ಕೂ ಅಷ್ಟೇ ವರ್ಷಗಳಾಗಿವೆ. ಅಂದಿನಿಂದಲೂ ಇಂದಿಗೂ ಯೋಗ ಅವರ ಬದುಕಿನ ಭಾಗ. ಶೀರ್ಷಾಸನ, ಸರ್ವಾಂಗಾಸನ, ಪಶ್ಚಿಮೋತ್ತಾನಾಸನ ಸೇರಿದಂತೆ ಹಲವು ಆಸನಗಳೊಂದಿಗೆ ಪ್ರಾಣಾಯಾಮ ನಿತ್ಯದ ಅಭ್ಯಾಸದ ಮೆನು.ಇದಕ್ಕಾಗಿ ಅರ್ಧ, ಮುಕ್ಕಾಲು ಗಂಟೆ ಮೀಸಲು.

ಕರಾವಳಿಯಲ್ಲಿ ಯೋಗ ಜನಪ್ರಿಯ ಗೊಳಿಸಿದವರಲ್ಲಿ ಪ್ರಮುಖರಾದ ಡಾ| ಕೃಷ್ಣ ಭಟ್‌ ಅವರು ಪಲಿಮಾರು ಸ್ವಾಮೀಜಿಯವರ ಯೋಗಾಭ್ಯಾಸಕ್ಕೆ ಪ್ರೇರಕರು. ಪ್ರಾಚೀನ ಸಂಪ್ರದಾಯದ ಸನ್ಯಾಸಿಗಳನ್ನು “ಅಷ್ಟಾಂಗ ಯೋಗ ನಿರತರು’ ಎಂದು ಕರೆಯುತ್ತಾರೆ. ನೀವೂ ಯೋಗ ನಿರತರಾಗಿ ಎಂದಿದ್ದ ರಂತೆ ಡಾ. ಭಟ್‌. ಯೋಗದಲ್ಲಿ ಪಿಎಚ್‌ಡಿ ಅಧ್ಯಯನ ಮಾಡಿದ, ಉಡುಪಿ ದೈವಜ್ಞ ಮಂದಿರದಲ್ಲಿ 3 ದಶಕಗಳಿಂದ ಯೋಗ ತರಗತಿ ನಡೆಸುತ್ತಿರುವ ಡಾ| ಗಣೇಶ ಭಟ್‌ ಸ್ವಾಮೀಜಿಯವರಿಗೆ ಯೋಗಾಸನಗಳನ್ನು ಕಲಿಸಿದವರು.

ಹಿಂದೆ ಉಪೇಕ್ಷೆ,  ಈಗ ಅಪೇಕ್ಷೆ
ಹಿಂದೆ ಪ್ರಾಣಾಯಾಮ ಮಾಡುವವರನ್ನು “ಮೂಗಿನ ಮೇಲೆ ಕೈ ಇಡುವವರು’, “ಮೂಗು ಮುಚ್ಚಿ ಕೊಳ್ಳುವವರು’ ಎಂದು ಗೇಲಿ ಮಾಡುತ್ತಿದ್ದರು. ಈಗ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಯೋಗ, ಪ್ರಾಣಾಯಾಮ ಅಭ್ಯಾಸ ನಿರತರಾಗಿದ್ದಾರೆ. ಬಾಬಾ ರಾಮ್‌ದೇವರಂತಹ ಯೋಗ ಸಾಧಕರು ಇದನ್ನು ಜನಪ್ರಿಯಗೊಳಿಸಿದ್ದಾರೆ. ಯೋಗದಿಂದ ನನಗೂ ಲಾಭವಾಗಿದೆ. ಇವುಗಳು ಆರೋಗ್ಯಕ್ಕೆ ಒಳ್ಳೆಯದೆಂಬ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿರುವುದು ಸಂತಸದ ಸಂಗತಿ. 
ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಪರ್ಯಾಯ ಶ್ರೀಪಲಿಮಾರು ಮಠ, ಶ್ರೀಕೃಷ್ಣಮಠ,  ಉಡುಪಿ.  

ಮಟಪಾಡಿ ಕುಮಾರಸ್ವಾಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next