ಕೊಲಂಬೊ: ಆರ್ಥಿಕವಾಗಿ ದಿವಾಳಿ ಹೊಂದಿರುವ ಶ್ರೀಲಂಕಾದಲ್ಲಿ ಐದು ವಾರಗಳಲ್ಲಿ ಎರಡನೇ ಬಾರಿಗೆ ದ್ವೀಪರಾಷ್ಟ್ರದಲ್ಲಿ ಶುಕ್ರವಾರ (ಮೇ 06) ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಅಧ್ಯಕ್ಷ ಗೊಟಬೊಯ ರಾಜಪಕ್ಸೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಇದನ್ನೂ ಓದಿ:ಇಂದೋರ್: ಎರಡು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, ಏಳು ಮಂದಿ ಸಜೀವ ದಹನ
ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಭದ್ರತಾ ಪಡೆಗಳಿಗೆ ಹೆಚ್ಚಿನ ಅಧಿಕಾರ ನೀಡಿ, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿ ವಿವರಿಸಿದೆ.
ಪ್ರಸ್ತುತ ರಾಜಪಕ್ಸೆ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಶುಕ್ರವಾರ ಬೆಳಗ್ಗೆ ಪಾರ್ಲಿಮೆಂಟ್ ಮುಂಭಾಗದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು. ಅಂಗಡಿ, ಮುಂಗಟ್ಟು, ಸಾರಿಗೆಯನ್ನು ಬಂದ್ ಮಾಡಿದ್ದು, ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕಠಿಣ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ಅಧ್ಯಕ್ಷ ಗೊಟಬೊಯ ವಕ್ತಾರ ತಿಳಿಸಿದ್ದಾರೆ.
ರಾಜಪಕ್ಸೆ ವಿರುದ್ಧ ದಂಗೆ ಎದ್ದಿರುವ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರನ್ನು ಬಂಧಿಸಿ ಯಾವುದೇ ನ್ಯಾಯಾಂಗ ವಿಚಾರಣೆ ಇಲ್ಲದೇ ದೀರ್ಘಕಾಲದವರೆಗೆ ಜೈಲಿನಲ್ಲಿಡುವ ಅಧಿಕಾರವನ್ನು ತುರ್ತುಪರಿಸ್ಥಿತಿ ಘೋಷಿಸಿ, ಭದ್ರತಾ ಪಡೆಗಳಿಗೆ ವಿಶೇಷ ಅಧಿಕಾರವನ್ನು ನೀಡಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ದೇಶಾದ್ಯಂತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ತುರ್ತು ಸೇವೆ ಮತ್ತು ಸಾರ್ವಜನಿಕ ವ್ಯವಸ್ಥೆಯ ನಿರ್ವಹಣೆ ಸುಗಮವಾಗಿ ನಡೆಯಲು ಅಧ್ಯಕ್ಷ ಗೊಟಬೊಯ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಸಿ ತುರ್ತುಪರಿಸ್ಥಿತಿ ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ.