Advertisement

ದಿವಾಳಿಯಂಚಿಗೆ ಶ್ರೀಲಂಕಾ! ಏನಿದು ಬಿಕ್ಕಟ್ಟು?

12:52 AM Mar 24, 2022 | Team Udayavani |

1948ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾ ಅತೀ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಆಹಾರ ವಸ್ತುಗಳ ಕೊರತೆ, ನಿರುದ್ಯೋಗ, ಇಂಧನ ಅಭಾವ, ವಿದೇಶಿ ಕರೆನ್ಸಿಯ ಕೊರತೆಯಿಂದ ಇಡೀ ದೇಶವೇ ದಿವಾಳಿಯಂಚಿಗೆ ತಲುಪಿದೆ. ಮೂರು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಜನ ವಲಸೆ ಹೋಗುವ ಸ್ಥಿತಿ ಬಂದಿದೆ. ಲಂಕೆಯ ಈ ಸ್ಥಿತಿಗೆ ಕಾರಣಗಳೇನು?

Advertisement

ಏನಿದು ಬಿಕ್ಕಟ್ಟು?
ದೇಶದ ಆರ್ಥಿಕತೆ ಪತನಗೊಳ್ಳಲು ವಿದೇಶಿ ಕರೆನ್ಸಿಯ ಕೊರತೆಯೇ ಪ್ರಮುಖ ಕಾರಣ. ಶ್ರೀಲಂಕಾವು ಆಮದಿನ ಮೇಲೆಯೇ ಅವಲಂಬಿಸಿದೆ. ಅದು ಪೆಟ್ರೋಲಿಯಂ, ಆಹಾರ ವಸ್ತು, ಪೇಪರ್‌, ಸಕ್ಕರೆ, ಕಾಳುಗಳು, ಔಷಧ, ಸಾರಿಗೆ ಸಲಕರಣೆ ಮತ್ತಿತರ ಅಗತ್ಯ ವಸ್ತುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ವಿದೇಶಿ ಕರೆನ್ಸಿಯ ಕೊರತೆ ಎಂದರೆ ಈ ಅಗತ್ಯ ವಸ್ತುಗಳನ್ನು ಖರೀದಿಸಲು ಹಣದ ಕೊರತೆ ಎದುರಾಗುವುದು.

ಪ್ರವಾಸೋದ್ಯಮಕ್ಕೆ ಹೊಡೆತ
ಶ್ರೀಲಂಕಾದ ಜಿಡಿಪಿಯ ಶೇ.10ರಷ್ಟು ಬರುವುದೇ ಪ್ರವಾಸೋದ್ಯಮದಿಂದ. 2019ರ ಕೊಲೊಂಬೋ ಸರಣಿ ಬಾಂಬ್‌ ಸ್ಫೋಟದ ಬಳಿಕ ಇಲ್ಲಿ ಪ್ರವಾಸೋದ್ಯಮ ಕುಸಿಯತೊಡಗಿತು. ಕೊರೊನಾ ಹಾಗೂ ಲಾಕ್‌ಡೌನ್‌ ಈ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿತು.

ಎಫ್ ಡಿಐ ಇಳಿಕೆ
2018ರಲ್ಲಿ ಶ್ರೀಲಂಕಾದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು 1.6 ಶತಕೋಟಿ ಡಾಲರ್‌ ಇತ್ತು. 2019ರಲ್ಲಿ ಇದು 793 ದಶಲಕ್ಷ ಡಾಲರ್‌ಗೆ, 2020ರಲ್ಲಿ 548 ದಶಲಕ್ಷ ಡಾಲರ್‌ಗೆ ಇಳಿಕೆಯಾಯಿತು. ಎಫ್ ಡಿಐ ಇಳಿಕೆಯ ಬೆನ್ನಲ್ಲೇ, ಮೀಸಲು ನಿಧಿಯಲ್ಲಿದ್ದ ವಿದೇಶಿ ಕರೆನ್ಸಿಯೂ ಇಳಿಮುಖವಾಯಿತು. ಇನ್ನೊಂದೆಡೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆಯಲೂ ಶ್ರೀಲಂಕಾ ನಿರಾಕರಿಸಿದ್ದು, ಅದರ ಆರ್ಥಿಕ ಪತನಕ್ಕೆ ಕೊನೇ ಮೊಳೆ ಹೊಡೆದಂತಾಯಿತು.

ರಾಸಾಯನಿಕ ಗೊಬ್ಬರಕ್ಕೆ ನಿಷೇಧ
ಕೃಷಿಯನ್ನು ಶೇ.100ರಷ್ಟು ಸಾವಯವವಾಗಿಸಬೇಕು ಎಂಬ ಉದ್ದೇಶವೂ ಶ್ರೀಲಂಕಾದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ದೇಶಾದ್ಯಂತ ರಾಸಾಯನಿಕ ಗೊಬ್ಬರಗಳಿಗೆ ಸರಕಾರ ನಿಷೇಧ ಹೇರಿದ ಕಾರಣ, ಕೃಷಿ ಉತ್ಪನ್ನಗಳ ಉತ್ಪಾದನೆ ಗಣನೀಯವಾಗಿ ಕುಗ್ಗಿತು. ಇದರ ಜತೆಗೆ “ಆಹಾರ ಮಾಫಿಯಾ’ವು ಅತ್ಯಗತ್ಯ ವಸ್ತುಗಳನ್ನು ಕಳ್ಳದಾಸ್ತಾನು ಮಾಡಿದ ಕಾರಣ ಆಹಾರ ವಸ್ತುಗಳ ಬೆಲೆ‌ ಗಗನಕ್ಕೇರಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next