ಕೊಲಂಬೋ: ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವ ಶ್ರೀಲಂಕಾದ ಸಂಪೂರ್ಣ ಸಚಿವ ಸಂಪುಟ ರಾಜೀನಾಮೆ ನೀಡಿದೆ. ಆದರೆ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ರಾಜೀನಾಮೆ ಬಗ್ಗೆ ಎಲ್ಲಾ ವದಂತಿಗಳನ್ನು ಶ್ರೀಲಂಕಾ ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆಯು ನಿರಾಕರಿಸಿದೆ. ಪ್ರಧಾನಿಯನ್ನು ಹೊರತುಪಡಿಸಿ ಸಚಿವ ಸಂಪುಟವು ರಾಜೀನಾಮೆ ನೀಡಿದೆ.
ದೇಶದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ನಡುವೆ ಪ್ರಧಾನಿ ಅವರು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರನ್ನು ಭೇಟಿ ಮಾಡಿದರು. ಮೂಲಗಳ ಪ್ರಕಾರ, ಈ ಸಭೆಯು ಪ್ರಧಾನಿ ರಾಜೀನಾಮೆ ಊಹಾಪೋಹಗಳನ್ನು ಹೆಚ್ಚಿಸಿದೆ. ಈ ಸಭೆಯಲ್ಲಿ ಹಲವಾರು ಪ್ರಮುಖ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಭಾನುವಾರ ತಡರಾತ್ರಿ ನಡೆದ ಸಭೆಯಲ್ಲಿ ಅಧ್ಯಕ್ಷ ಗೋಟಾಬಯ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಹೊರತುಪಡಿಸಿ ದೇಶದ ಕ್ಯಾಬಿನೆಟ್ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದೆ ಎಂದು ಶ್ರೀಲಂಕಾದ ಶಿಕ್ಷಣ ಸಚಿವ ದಿನೇಶ್ ಗುಣವರ್ದನಾ ಹೇಳಿದ್ದಾರೆ.
ಇದನ್ನೂ ಓದಿ:ದೇಶಭಕ್ತ ಹಿಂದೂಗಳಾಗಿ ವಾಪಸಾಗಲಿದ್ದಾರೆ ಪಂಡಿತರು: ಮೋಹನ್ ಭಾಗವತ್ ವಿಶ್ವಾಸ
ಶ್ರೀಲಂಕಾದ ಮಾಜಿ ಸಚಿವ ವಿಮಲ್ ವೀರವಾಂಸ ಅವರು ಅಧ್ಯಕ್ಷರನ್ನು ಭೇಟಿ ಮಾಡಿದರು. ದೇಶದಲ್ಲಿ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಸರ್ವಪಕ್ಷಗಳ ಮಧ್ಯಂತರ ಸರ್ಕಾರವನ್ನು ನೇಮಿಸಲು ಪ್ರಸ್ತಾಪಿಸಿದರು.
ಏರುತ್ತಿರುವ ಹಣದುಬ್ಬರ ಮತ್ತು ದುರ್ಬಲ ಕರೆನ್ಸಿ ಶ್ರೀಲಂಕಾದಲ್ಲಿ ಮೂಲ ಸರಕುಗಳ ಬೆಲೆಗಳನ್ನು ಗಗನಕ್ಕೇರಿಸಿದೆ. ತೀವ್ರ ಆರ್ಥಿಕ ಕುಸಿತದ ಕಾರಣದಿಂದ ದ್ವೀಪ ರಾಷ್ಟ್ರದ ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.