Advertisement

ಲಂಕಾ ತಿರುಗೇಟು; ಸರಣಿ ಸಮಬಲ

03:50 AM Jul 03, 2017 | Team Udayavani |

ಗಾಲೆ: ಶುಕ್ರವಾರ ಶ್ರೀಲಂಕಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ ಬೀಗುತ್ತಿದ್ದ ಪ್ರವಾಶಿ ಜಿಂಬಾಬ್ವೆ ತಂಡ, ರವಿವಾರ ಗಾಲೆಯಲ್ಲೇ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ. ಮ್ಯಾಥ್ಯೂಸ್‌ ಬಳಗ 5 ಪಂದ್ಯಗಳ ಸರಣಿಯನ್ನು 1-1 ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

Advertisement

“ಗಾಲೆ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಜಿಂಬಾಬ್ವೆ 33.4 ಓವರ್‌ಗಳಲ್ಲಿ 155 ರನ್ನಿಗೆ ಆಲೌಟಾದರೆ, ಶ್ರೀಲಂಕಾ 30.1 ಓವರ್‌ಗಳಲ್ಲಿ 3 ವಿಕೆಟಿಗೆ 158 ರನ್‌ ಬಾರಿಸಿ ಸುಲಭ ಜಯ ಸಾಧಿಸಿತು. ಸರಣಿಯ 3ನೇ ಪಂದ್ಯ ಜು. 6ರಂದು ಹಂಬಂತೋಟದಲ್ಲಿ ನಡೆಯಲಿದೆ.

ಹಸರಂಗ: 3ನೇ ಸಾಧಕ
ನೂತನ ರೂಪ ಪಡೆದ ಲಂಕೆಯ ಸ್ಪಿನ್‌ ದಾಳಿಯನ್ನು ನಿಭಾಯಿಸಲು ಜಿಂಬಾಬ್ವೆ ಸಂಪೂರ್ಣ ವಿಫ‌ಲವಾಯಿತು. ಚೈನಾಮನ್‌ ಬೌಲರ್‌ ಲಕ್ಷಣ ಸಂದಕನ್‌ 52ಕ್ಕೆ 4 ವಿಕೆಟ್‌ ಕಿತ್ತು ಜೀವನಶ್ರೇಷ್ಠ ಸಾಧನೆಗೈದರೆ, ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ 19ರ ಹರೆಯದ ಲೆಗ್‌ಸ್ಪಿನ್ನರ್‌ ವನಿಂದು ಹಸರಂಗ ಕೊನೆಯ 3 ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಕೆಡವಿ ಹ್ಯಾಟ್ರಿಕ್‌ ಹೀರೋ ಎನಿಸಿಕೊಂಡರು. ಕೇವಲ 2.4 ಓವರ್‌ ಎಸೆದ ಹಸರಂಗ 34ನೇ ಓವರಿನ 2ನೇ, 3ನೇ ಹಾಗೂ 4ನೇ ಎಸೆತಗಳಲ್ಲಿ ವಾಲರ್‌, ತಿರಿಪಾನೊ ಮತ್ತು ಚಟಾರ ವಿಕೆಟ್‌ಗಳನ್ನು ಹಾರಿಸಿದರು.

ಹಸರಂಗ ಸಾಧನೆ 15ಕ್ಕೆ 3 ವಿಕೆಟ್‌
ಹಸರಂಗ ಏಕದಿನ ಇತಿಹಾಸದ ಪಾದಾರ್ಪಣಾ ಪಂದ್ಯದಲ್ಲೇ ಹ್ಯಾಟ್ರಿಕ್‌ ಸಾಧನೆ ಮಾಡಿದ ಲಂಕೆಯ ಮೊದಲ, ವಿಶ್ವದ ಕೇವಲ 3ನೇ ಬೌಲರ್‌. ಬಾಂಗ್ಲಾದೇಶದ ತೈಜುಲ್‌ ಇಸ್ಲಾಮ್‌ ಮತ್ತು ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ ಉಳಿದಿಬ್ಬರು.

ಜಿಂಬಾಬ್ವೆ ಸರದಿಯ ಸರ್ವಾಧಿಕ ರನ್‌ ಆರಂಭಕಾರ ಹ್ಯಾಮಿಲ್ಟನ್‌ ಮಸಕಝ ಅವರಿಂದ ದಾಖಲಾಯಿತು. 56 ಎಸೆತ ಎದುರಿಸಿದ ಅವರು 8 ಬೌಂಡರಿ ನೆರವಿನಿಂದ 41 ರನ್‌ ಹೊಡೆದರು. ಆದರೆ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಮತ್ತೂಬ್ಬ ಓಪನರ್‌ ಸೊಲೋಮನ್‌ ಮೈರ್‌ ಇಲ್ಲಿ ಖಾತೆಯನ್ನೇ ತೆರೆಯಲಿಲ್ಲ. ಮಾಲ್ಕಂ ವಾಲರ್‌ 38, ಸೀನ್‌ ಇರ್ವಿನ್‌ 22 ರನ್‌ ಹೊಡೆದರು.

Advertisement

ಲಂಕಾ ಆಘಾತಕಾರಿ ಆರಂಭ
ಸಣ್ಣ ಮೊತ್ತದ ಚೇಸಿಂಗ್‌ ವೇಳೆ ಶ್ರೀಲಂಕಾ ಆರಂಭಿಕ ಆಘಾತಕ್ಕೊಳಗಾಯಿತು. 2.2 ಓವರ್‌ಗಳಲ್ಲಿ, 10 ರನ್‌ ಆಗುವಷ್ಟರಲ್ಲಿ ಗುಣತಿಲಕ (8) ಮತ್ತು ಮೆಂಡಿಸ್‌ (9) ಅವರನ್ನು ಕಳೆದುಕೊಂಡಿತು. ಚಟಾರ ಸತತ 2 ಎಸೆತಗಳಲ್ಲಿ ಇವರಿಗೆ ಪೆವಿಲಿಯನ್‌ ಹಾದಿ ತೋರಿಸಿದ್ದರು.

3ನೇ ವಿಕೆಟಿಗೆ ಜತೆಗೂಡಿದ ನಿರೋಷನ್‌ ಡಿಕ್ವೆಲ್ಲ (35) ಮತ್ತು ಉಪುಲ್‌ ತರಂಗ (ಅಜೇಯ 75) ತಂಡಕ್ಕೆ ರಕ್ಷಣೆ ಒದಗಿಸಿದರು. ಇವರಿಬ್ಬರ ಜತೆಯಾಟದಲ್ಲಿ 67 ರನ್‌ ಒಟ್ಟುಗೂಡಿತು. ತರಂಗ-ಮ್ಯಾಥ್ಯೂಸ್‌ (ಅಜೇಯ 28) ಮುರಿಯದ 4ನೇ ವಿಕೆಟಿಗೆ 81 ರನ್‌ ಪೇರಿಸಿದರು. ತರಂಗ ಅವರ 75 ರನ್‌ 86 ಎಸೆತಗಳಿಂದ ಬಂತು. ಇದರಲ್ಲಿ 8 ಬೌಂಡರಿ ಒಳಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ-33.4 ಓವರ್‌ಗಳಲ್ಲಿ 155 (ಮಸಕಝ 41, ವಾಲರ್‌ 38, ಇರ್ವಿನ್‌ 22, ಸಂದಕನ್‌ 52ಕ್ಕೆ 4, ಹಸರಂಗ 15ಕ್ಕೆ 3). ಶ್ರೀಲಂಕಾ-30.1 ಓವರ್‌ಗಳಲ್ಲಿ 3 ವಿಕೆಟಿಗೆ 158 (ತರಂಗ ಔಟಾಗದೆ 75, ಡಿಕ್ವೆಲ್ಲ 35, ಮ್ಯಾಥ್ಯೂಸ್‌ ಔಟಾಗದೆ 28, ಚಟಾರ 33ಕ್ಕೆ 2).

ಪಂದ್ಯಶ್ರೇಷ್ಠ: ಲಕ್ಷಣ ಸಂದಕನ್‌

Advertisement

Udayavani is now on Telegram. Click here to join our channel and stay updated with the latest news.

Next