ಢಾಕಾ: ಆತಿಥೇಯ ಬಾಂಗ್ಲಾದೇಶವನ್ನು ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ 1-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
ಗೆಲುವಿಗೆ 29 ರನ್ನುಗಳ ಸಣ್ಣ ಸವಾಲು ಪಡೆದ ಶ್ರೀಲಂಕಾ, ಪಂದ್ಯದ ಅಂತಿಮ ದಿನವಾದ ಶುಕ್ರವಾರ ವಿಕೆಟ್ ನಷ್ಟವಿಲ್ಲದೆ ಇದನ್ನು ಸಾಧಿಸಿತು. ಸರಣಿಯ ಮೊದಲ ಟೆಸ್ಟ್ ಪಂದ್ಯದ ಡ್ರಾಗೊಂಡಿತ್ತು.
ಬಾಂಗ್ಲಾದೇಶದ 365 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ಶ್ರೀಲಂಕಾ 506 ರನ್ ರಾಶಿ ಹಾಕಿತು. ಏಂಜೆಲೊ ಮ್ಯಾಥ್ಯೂಸ್ ಅಜೇಯ 145, ದಿನೇಶ್ ಚಂಡಿಮಾಲ್ 124, ನಾಯಕ ದಿಮುತ್ ಕರುಣಾರತ್ನೆ 80 ರನ್ ಬಾರಿಸಿ 141 ರನ್ ಲೀಡ್ ಒದಗಿಸಿದರು.
ಅಸಿತ ಅಸಾಮಾನ್ಯ ಬೌಲಿಂಗ್
ಬಾಂಗ್ಲಾದೇಶ ದ್ವಿತೀಯ ಸರದಿಯಲ್ಲಿ ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿ 169ಕ್ಕೆ ಕುಸಿಯಿತು. ಮಧ್ಯಮ ವೇಗಿ ಅಸಿತ ಫೆರ್ನಾಂಡೊ 51 ರನ್ನಿತ್ತು 6 ವಿಕೆಟ್ ಉಡಾಯಿಸಿ ಮೊಮಿನುಲ್ ಹಕ್ ಪಡೆಯನ್ನು ಸಂಕಟಕ್ಕೆ ತಳ್ಳಿದರು. ಅಸಿತ ಫೆರ್ನಾಂಡೊ ಮೊದಲ ಇನ್ನಿಂಗ್ಸ್‌ನಲ್ಲೂ ಘಾತಕ ದಾಳಿ ನಡೆಸಿ 4 ವಿಕೆಟ್ ಉರುಳಿಸಿದ್ದರು.
ಇದರೊಂದಿಗೆ ಮೊದಲ ಸಲ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಕೆಡವಿದ ಸಾಧನೆಗೈದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ಅವರ 4ನೇ ಟೆಸ್ಟ್ ಪಂದ್ಯವಾಗಿದೆ. ಸರಣಿಶ್ರೇಷ್ಠ ಗೌರವ ಏಂಜೆಲೊ ಮ್ಯಾಥ್ಯೂಸ್ ಪಾಲಾಯಿತು.
Related Articles
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-365 ಮತ್ತು 169. ಶ್ರೀಲಂಕಾ-506 ಮತ್ತು ವಿಕೆಟ್ ನಷ್ಟವಿಲ್ಲದೆ 29. ಪಂದ್ಯಶ್ರೇಷ್ಠ: ಅಸಿತ ಫೆರ್ನಾಂಡೊ.
ಸರಣಿಶ್ರೇಷ್ಠ: ಏಂಜೆಲೊ ಮ್ಯಾಥ್ಯೂಸ್.