ಕೊಲಂಬೋ : ಈಸ್ಟರ್ ಆಚರಣೆಯ ವೇಳೆ ಶ್ರೀಲಂಕಾ ರಾಜಧಾನಿ ಕೊಲಂಬೋ ಸೇರಿ ಮೂರು ನಗರಗಳಲ್ಲಿ ಉಗ್ರರು ಸರಣಿ ಸ್ಫೋಟಗಳನ್ನು ನಡೆಸಿದ್ದು, ಭಾರೀ ದಾಳಿಗೆ ವಿದೇಶಿಗರು ಸೇರಿ 129 ಮಂದಿ ಪ್ರಾಣ ಕಳೆದುಕೊಂಡಿದ್ದು , 300 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸರಣಿ ದಾಳಿಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದ್ದು, ಕೊಲಂಬೋ ಸೇರಿದಂತೆ ಶ್ರೀಲಂಕಾದೆಲ್ಲೆಡೆ ಹೈ ಅಲರ್ಟ್ ಘೋಷಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಮೂರು ಚರ್ಚ್‌ಗಳು ಮತ್ತು ಮೂರು ಪಂಚತಾರಾ ಹೊಟೇಲ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.
ಬಟ್ಟಿಕಾಲೋಯಾದ ಚರ್ಚ್‌ನಲ್ಲಿ ಮೊದಲ ನ್ಪೋಟ ಸಂಭವಸಿದ್ದು, ಬಳಿಕ ಕೊಲಂಬೋದ ಕೊಚ್ಚಿಕೊಡೆಯ ಚರ್ಚ್‌ನಲ್ಲಿ ಸ್ಫೋಟ ಸಂಭವಿಸಿದೆ.
ಈಸ್ಟರ್ ಆಚರಣೆಗಾಗಿ ಭಾರೀ ಸಂಖ್ಯೆಯ ಜನರು ಚರ್ಚ್‌ನಲ್ಲಿ ಜಮಾವಣೆಗೊಂಡಿರುವುದನ್ನು ಗುರಿಯಾಗಿರಿಸಿಕೊಂಡು ಭೀಕರ ದಾಳಿ ನಡೆಸಲಾಗಿದೆ.
ಕೊಲಂಬೋ ನಗರದಲ್ಲಿ ಸೇನಾ ಪಡೆಗಳ ತುಕಡಿಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಪ್ರಧಾನಿ ರಣಿಲ್ ವಿಕ್ರಮಸಿಂಘೆ ಅವರು ಭದ್ರತಾ ಸಮಿತಿಯ ತುರ್ತು ಸಭೆಯನ್ನು ಕರೆದು ಸ್ಫೋಟಗಳ ಬಗ್ಗೆ ವಿವರ ಕೇಳಿದ್ದಾರೆ.
ಯಾವ ಉಗ್ರ ಸಂಘಟನೆ ದಾಳಿ ನಡೆಸಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.