ಕೊಲಂಬೊ: ಶ್ರೀಲಂಕಾದಲ್ಲಿ ಮುದ್ರಣ ಕಾಗದದ ಭಾರೀ ಕೊರತೆಯುಂಟಾದ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆಯನ್ನು ಮುಂದೂಡಿದ ಬೆನ್ನಲ್ಲೇ ಶ್ರೀಲಂಕಾ 2.5 ಶತಕೋಟಿ ಡಾಲರ್ ನಷ್ಟು ಸಾಲದ ನೆರವು ನೀಡಬೇಕೆಂದು ಚೀನಾಕ್ಕೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಒಂದೇ ವರ್ಷದಲ್ಲಿ 8 ಸರಕಾರಿ ಹುದ್ದೆಗೆ ಆಯ್ಕೆಯಾದ ನಿವೃತ್ತ ಯೋಧ : ಪರಿಶ್ರಮಕ್ಕೆ ತಕ್ಕ ಫಲ
ದ್ವೀಪರಾಷ್ಟ್ರವಾದ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ಇದೀಗ ಹಣಕಾಸು ನೆರವು ನೀಡುವಂತೆ ಚೀನಾ ಜೊತೆ ಮಾತುಕತೆ ನಡೆಸಿರುವುದಾಗಿ ಚೀನಾದ ಅಧಿಕಾರಿಗಳು ಸೋಮವಾರ (ಮಾರ್ಚ್ 21) ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿರುವ ಚೀನಾ ರಾಯಭಾರಿ ಕ್ವಿ ಝೆನ್ ಹಾಂಗ್ ಸುದ್ದಿಗಾರರ ಜತೆ ಮಾತನಾಡುತ್ತ, ಶ್ರೀಲಂಕಾ ಸರ್ಕಾರ ಮನವಿ ಮಾಡಿಕೊಂಡಿರುವ ಪ್ರತ್ಯೇಕ ಸಾಲದ ಕುರಿತು ಉಭಯ ದೇಶಗಳ ನಡುವೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾ ಸರ್ಕಾರ ಈ ವರ್ಷ ಸುಮಾರು 4 ಶತಕೋಟಿ ಡಾಲರ್ ನಷ್ಟು ಸಾಲವನ್ನು ಮರುಪಾವತಿ ಮಾಡಬೇಕಾಗಿದೆ. ಇದರಲ್ಲಿ ಒಂದು ಶತಕೋಟಿ ಡಾಲರ್ ನಷ್ಟು ಅಂತಾರಾಷ್ಟ್ರೀಯ ಸವರಿಯನ್ ಬಾಂಡ್ ನ ಅವಧಿ ಜುಲೈನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಚೀನಾ ತಿಳಿಸಿದೆ.
ಅಷ್ಟೇ ಅಲ್ಲ ಶ್ರೀಲಂಕಾ ಸರ್ಕಾರ ಇಂಧನ ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳ ಪಾವತಿ ಮಾಡಲು ಹೆಣಗಾಡುತ್ತಿದೆ ಮತ್ತು ಇಂಧನ ಕೊರತೆಯಿಂದಾಗಿ ದೇಶಾದ್ಯಂತ ಪವರ್ ಕಟ್ ಮಾಡುತ್ತಿರುವುದಾಗಿ ವರದಿ ವಿವರಿಸಿದೆ.
ಶ್ರೀಲಂಕಾ ಸರ್ಕಾರದಲ್ಲಿ ವಿದೇಶಿ ವಿನಿಮಯದ ಕೊರತೆಯುಂಟಾದ ಪರಿಣಾಮ ಮುದ್ರಣದ ಕಾಗದ ಮತ್ತು ಶಾಯಿ ಖರೀದಿಸುವಷ್ಟು ಹಣವಿಲ್ಲ. ಹೀಗಾಗಿ ಸೋಮವಾರದಿಂದ ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದೆ.