ದಂಬುಲ: ಶ್ರೀಲಂಕಾ ಕ್ರಿಕೆಟಿಗರ ಮತ್ತೂಂದು ಹೀನಾಯ ಪ್ರದರ್ಶನದಿಂದ ರೊಚ್ಚಿಗೆದ್ದ ಅಭಿಮಾನಿಗಳು ತಂಡದ ಕ್ರಿಕೆಟ್ ಬಸ್ಸನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಭಾರತದೆದುರಿನ ದಂಬುಲ ಏಕದಿನ ಪಂದ್ಯವನ್ನು ಸೋತ ಬಳಿಕ ತೀವ್ರ ಆಕ್ರೋಶಗೊಂಡ ಅಭಿಮಾನಿಗಳು ಶ್ರೀಲಂಕಾ ತಂಡದ ಬಸ್ ನಿಂತಿದ್ದ ಜಾಗಕ್ಕೆ ತೆರಳಿ ಮುತ್ತಿಗೆ ಹಾಕಿದರು.
ತವರಿನ ಕ್ರಿಕೆಟಿಗರ ಹಾಗೂ ಕ್ರಿಕೆಟ್ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದರು. “ನಮಗೆ ನಮ್ಮ ಕ್ರಿಕೆಟ್ ಮರಳಿಸಿ, 1996 ದಿನಗಳ ಕ್ರಿಕೆಟ್ ಮರಳಲಿ…’ ಎಂದು ಬೊಬ್ಬಿರಿದರು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಅಭಿಮಾನಿಗಳನ್ನು ಚದುರಿಸಿದರು. ಇದರಿಂದ ಶ್ರೀಲಂಕಾ ಕ್ರಿಕೆಟಿಗರ ಪ್ರಯಾಣ ಅರ್ಧ ಗಂಟೆ ವಿಳಂಬ ಗೊಂಡಿತು. ಈ ಘಟನೆಯ ಬಳಿಕ ಲಂಕೆಯ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕರ ಅವರು ಅಭಿಮಾನಿಗಳನ್ನು
ಸಮಾಧಾನ ಪಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
“ನಾವು ಗೆದ್ದಾಗ ನೀವು ಸಂಭ್ರಮಿಸುತ್ತೀರಿ. ಸೋತಾಗ ನೀವು ನಮ್ಮ ಕೈಹಿಡಿಯುವ ಕೆಲಸ ಮಾಡಬೇಕು. ತಂಡ ಸಂಕಟದಲ್ಲಿದ್ದಾಗಲಂತೂ ನಿಮ್ಮಂಥ ಅಭಿಮಾನಿಗಳ ಬೆಂಬಲ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಈಗ ನಿಮ್ಮಿಂದ ನಮ್ಮ ಕ್ರಿಕೆಟಿಗರು ನಿರೀಕ್ಷಿಸುವುದು ಇದನ್ನೇ. ಬೆಂಬಲ, ಪ್ರೀತಿ, ತಾಳ್ಮೆ ಮತ್ತು ಪರಿಶ್ರಮ. ನಾವೆಲ್ಲ ತಂಡದ ಗೆಲುವಿಗಾಗಿ ಹಾರೈಸೋಣ, ತಂಡವನ್ನು ಬೆಂಬಲಿಸೋಣ…’ ಎಂದು ಸಂಗಕ್ಕರ ಸಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡಿದ್ದಾರೆ.
ಇತ್ತೀಚೆಗೆ ಶ್ರೀಲಂಕಾ ತಂಡ ಸತತವಾಗಿ ವಿಫಲವಾಗುತ್ತಿದೆ. ಕ್ರಿಕೆಟ್‌ನ ಅತ್ಯಂತ ದುರ್ಬಲ ಎನಿಸಿಕೊಂಡಿರುವ ಜಿಂಬಾಬ್ವೆ ಎದುರು ತನ್ನದೇ ನೆಲದಲ್ಲಿ 3-2ರಿಂದ ಏಕದಿನ ಸರಣಿ ಸೋತಿತ್ತು. ಅದರ ಬೆನ್ನಲ್ಲೇ ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ 3-0ಯಿಂದ ವೈಟ್‌ವಾಷ್ ಸೋಲನುಭವಿಸಿತು.
ಇದು ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ.