Advertisement

ಕರಾವಳಿಗೆ ವಲಸಿಗರ ಆತಂಕ; ದ್ವೀಪರಾಷ್ಟ್ರ ಲಂಕೆಯಲ್ಲಿ ತಲ್ಲಣ; ರಾಜ್ಯದಲ್ಲೂ ಎಚ್ಚರಿಕೆ..!

07:56 AM May 12, 2022 | Team Udayavani |

ಮಂಗಳೂರು: ಆರ್ಥಿಕ ಮತ್ತು ರಾಜಕೀಯ ತಲ್ಲಣಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾದೊಂದಿಗೆ ಸಮುದ್ರ ಗಡಿ ಹಂಚಿಕೊಂಡಿರುವ ಭಾರತಕ್ಕೆ ವಲಸಿಗರ ಆತಂಕ ಎದುರಾಗಿದ್ದು, ರಾಜ್ಯ ಕರಾವಳಿಯಲ್ಲೂ ನಿಗಾ ಹೆಚ್ಚಿಸಲಾಗಿದೆ.

Advertisement

ಲಂಕಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಲ್ಲಿನ ಪ್ರಜೆ ಗಳು ಅಕ್ರಮವಾಗಿ ದಕ್ಷಿಣ ಭಾರತಕ್ಕೆ ಬರಲು ಯತ್ನಿಸುತ್ತಿರುವುದನ್ನು ಭಾರತೀಯ ಬೇಹು ವಿಭಾಗ ಪತ್ತೆ ಹಚ್ಚಿದೆ. ಹಾಗಾಗಿ ಕರ್ನಾಟಕ ಸೇರಿದಂತೆ ದ. ಭಾರತದ ಕರಾವಳಿ ರಾಜ್ಯ ಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.

ಲಭ್ಯ ಮಾಹಿತಿಯ ಪ್ರಕಾರ ತಮಿಳುನಾಡಿಗೆ ಈಗಾಗಲೇ ವಲಸಿಗರು ಬರತೊಡಗಿದ್ದಾರೆ. ಕೇರಳ, ಕರ್ನಾಟಕದ ಕರಾವಳಿಗೂ ಬರಬಹುದು ಎಂಬ ಕಳವಳ ವ್ಯಕ್ತವಾಗಿದೆ.

ಕಟ್ಟೆಚ್ಚರದಲ್ಲಿ ಭದ್ರತಾ ಸಂಸ್ಥೆಗಳು
ಈಗಾಗಲೇ ಗುಪ್ತಚರ ಇಲಾಖೆಯ ಸೂಚನೆಯನ್ವಯ ಕರಾವಳಿ ಕಾವಲು ಪೊಲೀಸ್‌(ಸಿಎಸ್‌ಪಿ) ಅಧಿಕಾರಿಗಳು ಸಭೆ ನಡೆಸಿ ಲಂಕನ್ನರು ಬಂದಿಳಿಯಬಹುದಾದ ತಾಣಗಳ ಮೇಲೆ ನಿಗಾ ಇರಿಸಿದ್ದಾರೆ.

ಮಂಗಳೂರು, ಹೆಜಮಾಡಿ, ಮಲ್ಪೆ, ಭಟ್ಕಳ, ಗಂಗೊಳ್ಳಿ, ಕುಮಟಾ, ಹೊನ್ನಾವರ, ಬೇಲೆಕೇರಿ ಮತ್ತು ಕಾರವಾರಗಳಲ್ಲಿ 9 ಸಿಎಸ್‌ಪಿ ಠಾಣೆಗಳು ಇದ್ದು, ಅವೆಲ್ಲವನ್ನೂ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ ಎಂದು ಸಿಎಸ್‌ಪಿ ಮೂಲಗಳು ತಿಳಿಸಿವೆ.

Advertisement

ನಮ್ಮ ವ್ಯಾಪ್ತಿಯ ಮೀನುಗಾರರ ಒಂದು ಹಂತದ ಸಭೆ ನಡೆಸಿ, ಕಡಲಿನಲ್ಲಿ ಅಪರಿಚಿತ ಬೋಟುಗಳು, ಮೀನುಗಾರರು ಕಂಡುಬಂದರೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಸಾಗರ ರಕ್ಷಾ ದಳ (ಎಸ್‌ಆರ್‌ಡಿ) ಮತ್ತು ಮೀನುಗಾರ ಸಮಿತಿಗೂ ಮಾಹಿತಿ ನೀಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಮಂಗಳೂರಿಗೆ ಅಧಿಕೃತವಾಗಿ ಕೇರಳ ಕಡೆಯಿಂದ ಮೀನುಗಾರಿಕೆ ಬೋಟ್‌ಗಳು ಬರುವುದನ್ನು ತಡೆ
ಹಿಡಿಯಲಾಗಿದೆ. ಜತೆಗೆ ಕರಾವಳಿಯಾದ್ಯಂತ ನಿಗಾ ಬಿಗಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆತಂಕಗಳೇನು?
ಮಳೆಗಾಲದಲ್ಲಿ ಭಾರತೀಯ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧವಿರುತ್ತದೆ. ಆದರೆ ಲಂಕಾದ ಮೀನು ಗಾರರು ಮಳೆಗಾಲದಲ್ಲೂ ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗಿರುತ್ತಾರೆ. ಆಗ ಚಂಡ ಮಾರುತದಂತಹ ತುರ್ತು ಸನ್ನಿವೇಶ ಎದುರಾದರೆ ಹತ್ತಿರದ ಭಾರತೀಯ ಬಂದರಿಗೆ ನುಗ್ಗುತ್ತಾರೆ. ಅವುಗಳಲ್ಲಿ ಮಂಗಳೂರು, ಮಲ್ಪೆ ಕೂಡ ಸೇರಿವೆ. ಇಂಥ ಸಂದರ್ಭದಲ್ಲಿ ಭದ್ರತಾ ಲೋಪವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಯೊಬ್ಬರು.
2ನೇ ಅಂಶವೆಂದರೆ, ಮಾನವ ಕಳ್ಳಸಾಗಣೆಯ ಏಜೆಂಟರ ನೆರವಿ ನೊಂದಿಗೆ ತ.ನಾಡು ಮೂಲಕ ಆಗಮಿಸುವ ಲಂಕನ್ನರು ಮಂಗ ಳೂರು ಮೂಲಕ ಕೆನಡಾ, ಫ್ರಾನ್ಸ್‌ ನಂತಹ ದೇಶಗಳಿಗೆ ಪರಾರಿಯಾಗುವ ಸಾಧ್ಯತೆಯೂ ಇದೆ. ಕಳೆದ ವರ್ಷ ವಷ್ಟೇ ಮಂಗಳೂರಿನಲ್ಲಿ ಇಂಥ ಪ್ರಯತ್ನದಲ್ಲಿದ್ದ 38 ಲಂಕನ್ನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜತೆಗೆ ಎಲ್‌ಟಿಟಿಇ ಉಗ್ರರು ಇನ್ನೂ ಲಂಕಾದಲ್ಲಿ ಸಕ್ರಿಯರಾಗಿದ್ದು, ಅವರೂ ಇದೇ ಸಂದರ್ಭ ಭಾರತಕ್ಕೆ ಬರುವ ಅಪಾಯವೂ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

ಶ್ರೀಲಂಕಾ ವಲಸಿಗರು ಬರುವ ಬಗ್ಗೆ ಇಲಾಖೆಯನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ಸಾಗರ ರಕ್ಷಾ ದಳಕ್ಕೂ ಮಾಹಿತಿ ನೀಡಿದ್ದೇವೆ. ಬೋಟ್‌ಗಳು ನಿರಂತರ ಕಾವಲು ನಡೆಸುತ್ತಿವೆ. ಇದುವರೆಗೆ ಸಂಶಯಾಸ್ಪದ ಚಟುವಟಿಕೆ ಕಂಡುಬಂದಿಲ್ಲ. ಲ್ಯಾಂಡಿಂಗ್‌ ತಾಣಗಳ ಮೇಲೂ ನಿಗಾ ಇರಿಸಿದ್ದೇವೆ.
-ಅನ್ಯು ಕುಮಾರ್‌,
ಎಸ್‌ಪಿ, ಕರಾವಳಿ ಕಾವಲು ಪೊಲೀಸ್‌ (ಸಿಎಸ್‌ಪಿ)

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next