ಕೊಲಂಬೋ: ತನ್ನ ಇತಿಹಾಸದಲ್ಲೇ ಅತ್ಯಂತ ಕಠಿನ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ಶ್ರೀಲಂಕಾಕ್ಕೆ ಭಾರತ ಸರಕಾರ ಹೆಗಲಿಗೆ ಹೆಗಲು ಕೊಟ್ಟಿದೆ. ಅದನ್ನು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅಷ್ಟೇ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಕಳೆದ ವಾರವೂ ಅವರು ಭಾರತದ ನೆರವಿಗೆ ಧನ್ಯವಾದ ಅರ್ಪಿಸಿದ್ದರು.
ಇತ್ತೀಚೆಗೆ ಜಪಾನ್‌ನಲ್ಲಿ ನಡೆದಿದ್ದ ಕ್ವಾಡ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸರ ಕಾರದ ಮನವೊಲಿಸಿ, ಭಾರತ- ಜಪಾನ್ ಜಂಟಿ ಸಹಭಾಗಿತ್ವದಲ್ಲಿ ಶ್ರೀಲಂಕಾಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ, ಭಾರತಕ್ಕೆ ಲಂಕಾ ಪ್ರಧಾನಿ ಪುನಃ ಧನ್ಯವಾದ ಅರ್ಪಿಸಿದ್ದಾರೆ. “”ಭಾರತ ಮತ್ತು ಜಪಾನ್‌ನಿಂದ ಸಿಕ್ಕಿದ ನೆರವಿಗೆ ನಾವು ಆಭಾರಿಯಾಗಿದ್ದೇವೆ. ಕ್ವಾಡ್ ಸದಸ್ಯ ರಾಷ್ಟ್ರಗಳಿಗೆ ನಾವು ಮನವಿ ಮಾಡಿ ದಾಗ, ಭಾರತ-ಜಪಾನ್ ಮುಂದೆ ನಿಂತು ವಿದೇಶಗಳಿಂದ ಶ್ರೀಲಂಕಾಕ್ಕೆ ನೆರವು ಒದಗಿ ಸಲು ಸಹಾಯ ಮಾಡಿವೆ. ನಾನು ಖಾಸಗಿ ಯಾಗಿ ಭಾರತದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ರೊಂದಿಗೆ ಮಾತನಾಡಿ ಕೃತ ಜ್ಞತೆ ಸಲ್ಲಿಸಿದ್ದೇನೆ” ಎಂದು ರಾನಿಲ್ ಹೇಳಿದ್ದಾರೆ.
ಶುಕ್ರವಾರ ಕೂಡ 25 ಟನ್‌ನಷ್ಟು ವೈದ್ಯಕೀಯ ಸಾಮಗ್ರಿಯನ್ನು ಲಂಕಾಕ್ಕೆ ಹಸ್ತಾಂತರಿಸಿದೆ. ಇದರ ಒಟ್ಟು ಮೌಲ್ಯ 5.45 ಕೋಟಿ ರೂ.ಗಳು. ಕಳೆದ ವಾರ 9,000 ಮೆಟ್ರಿಕ್ ಟನ್ ಅಕ್ಕಿ, 200 ಮೆಟ್ರಿಕ್ ಟನ್ ಹಾಲಿನ ಪುಡಿ, 24 ಮೆಟ್ರಿಕ್ ಟನ್ ಔಷಧಗಳನ್ನು ಕಳುಹಿಸಿತ್ತು. ಅದಕ್ಕೂ ಮುನ್ನ ಪೆಟ್ರೋಲ್, ಡೀಸೆಲ್‌ಗಳನ್ನು ಕಳುಹಿಸಿದೆ.
ಶಿಕ್ಷಣ ವ್ಯವಸ್ಥೆಗೆ ಸುಧಾರಣೆ: ಶ್ರೀಲಂಕಾ ದಲ್ಲಿ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಲು, ಅಲ್ಲಿನ ಸರಕಾರ ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಗೊಟಬಾಯ ರಾಜಪಕ್ಸ, ಶಾಲೆ ತೊರೆದ ಮಕ್ಕಳು ಮತ್ತೆ ಶಾಲೆಗೆ ಸೇರಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನೂ ಹೊರಹಾಕಲು ಅವಕಾಶವಿರುವ ವ್ಯವಸ್ಥೆ ಸೃಷ್ಟಿಸಲು ಚಿಂತಿಸಲಾಗಿದೆ ಎಂದಿದ್ದಾರೆ.
50 ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ಶ್ರೀಲಂಕಾದ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ಶ್ರೀಲಂಕಾ ನಾಗರಿಕರು ಕೊಲಂಬೋದಲ್ಲಿ ನಡೆಸುತ್ತಿರುವ ಪ್ರತಿಭಟನೆ ಶನಿವಾರದಂದು 50ನೇ ದಿನಕ್ಕೆ ಕಾಲಿಟ್ಟಿತು. ಇಷ್ಟು ದಿನವಾ ದರೂ ಗೊಟಬಾಯ ರಾಜೀನಾಮೆ ಸಲ್ಲಿಸದ ಕಾರಣ ಪ್ರತಿಭಟನೆಯನ್ನು ಮತ್ತಷ್ಟು ಶಕ್ತಿಶಾಲಿಯಾಗಿ ರೂಪಿಸ ಲಾಗುತ್ತದೆ ಹಾಗೂ ಹೆಚ್ಚೆಚ್ಚು ಜನರನ್ನು ಪ್ರತಿಭಟನೆಗೆ ಸೆಳೆಯ ಲಾಗುತ್ತದೆ ಎಂದು ಸಂಘಟಕರು ಹೇಳಿದ್ದಾರೆ. ಪ್ರತಿಭಟನೆ ಆರಂಭ ವಾದಾಗ, ಆಗಿನ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ರಾಜೀನಾಮೆಗೂ ಒತ್ತಾಯಿಸಲಾಗಿತ್ತು. ಅದಕ್ಕೆ ಮಣಿದಿದ್ದ ರಾಜಪಕ್ಸ ಮೇ 9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.