Advertisement

ಅಂಕೆಗೆ ನಿಲುಕದ ಲಂಕೆ; ತುರ್ತು ಪರಿಸ್ಥಿತಿ ಘೋಷಣೆಯ ಬೆನ್ನಲ್ಲೇ ಭುಗಿಲೆದ್ದ ಜನಾಕ್ರೋಶ

10:49 AM Apr 05, 2022 | Team Udayavani |

ಕೊಲೊಂಬೋ: ತುರ್ತು ಪರಿಸ್ಥಿತಿ ಘೋಷಿಸಿದ ಬೆನ್ನಲ್ಲೇ ಲಂಕಾ ದ್ವೀಪದಲ್ಲಿ ಜನಾಕ್ರೋಶ ಸೋಮವಾರ ಜ್ವಾಲಾಸ್ವರೂಪ ಪಡೆದಿತ್ತು. ಎಲ್ಲೆಡೆ ಕರ್ಫ್ಯೂ, ಪ್ರಧಾನಿ ನಿವಾಸದ ಮುಂದೆ ಕಟ್ಟುನಿಟ್ಟಿನ ಸರ್ಪಗಾವಲು ನಿರ್ಮಿಸಿದ್ದಾಗ್ಯೂ, ಪ್ರಜೆಗಳ ರೋಷಾಗ್ನಿ ಮುಂದೆ ಅವೆಲ್ಲ ಪ್ರಯೋಜನಕ್ಕೆ ಬಾರದೇ, ದಿನವಿಡೀ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

Advertisement

ತಂಗಲ್ಲೆಯಲ್ಲಿನ ಪ್ರಧಾನಿ ಮಹೀಂದ್ರ ರಾಜ ಪಕ್ಸೆ ನಿವಾಸದ ಮುಂದೆ ಜನಾಕ್ರೋಶ ತಡೆಯಲು ಪೊಲೀ ಸರು ಭಾರೀ ಹರ ಸಾಹಸಪಟ್ಟರು. ಅಶ್ರುವಾಯು, ಜಲ ಫಿರಂಗಿ ಗಳನ್ನು ಲೆಕ್ಕಿಸದೆ, ಸುಮಾರು 2 ಸಾವಿರ ಪ್ರತಿಭಟನಾಕಾರರು ಪ್ರಧಾನಿ ನಿವಾಸದ ಆವರಣಕ್ಕೆ ನುಗ್ಗಿ, ಆರ್ಥಿಕ ಮುಗ್ಗಟ್ಟಿನ ವಿರುದ್ಧ ಆಕ್ರೋಶ ಹೊರಹಾಕಿದರು.

ಕೊಲೊಂಬೊದಿಂದ 200 ಕಿ.ಮೀ.ದೂರದಲ್ಲಿರುವ ತಂಗಲ್ಲೆಯು ರಾಜಪಕ್ಸೆ ವಂಶದ ಭದ್ರಕೋಟೆ. ಸಿಂಹಳೀಯರು ಅಧಿಕ ಸಂಖ್ಯೆಯಲ್ಲಿರುವ ಈ ಭಾಗದಲ್ಲಿ ಪ್ರತಿ ಭಟನೆ ಮುಗಿಲು ಮುಟ್ಟಿದೆ. ಪೊಲೀಸರನ್ನು ತಳ್ಳಿ, ಬ್ಯಾರಿ ಕೇಡ್‌ಗಳನ್ನು ಛಿದ್ರಗೊಳಿಸಿ, ನಿವಾಸದ ಮುಂದೆ ಜಮಾ ಯಿಸಿದ ಪ್ರತಿಭಟನಾಕಾರರು, ರಾಜಪಕ್ಸೆಗೆ ಪ್ರಧಾನಿ ಕುರ್ಚಿಯಿಂದ ಕೆಳಗಿಳಿಯುವಂತೆ ಪಟ್ಟುಹಿಡಿ ದಿದ್ದರು. ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಸಂಬಂಧಿಸಿದಂತೆ ಇದುವರೆಗೆ 664 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ರಾಜಪಕ್ಸೆ ವಂಶಾಡಳಿತ ಅಂತ್ಯ?: ಕ್ಯಾಬಿನೇಟ್‌ ಸಚಿವರ ಸಾಮೂಹಿಕ ರಾಜೀನಾಮೆಯಿಂದ ತೀವ್ರ ಒತ್ತಡಕ್ಕೆ ಸಿಲುಕಿರುವ ಮಹೀಂದ್ರ ರಾಜಪಕ್ಸೆ ನೇತೃತ್ವದ ಸರ್ಕಾರ ಸದ್ಯ ತೂಗುಯ್ಯಾಲೆಯಲ್ಲಿದೆ. ದೇಶದ ಅತ್ಯಂತ ಪವರ್‌ಫುಲ್ ಕುಟುಂಬದ ರಾಜಕಾರಣ, ಆರ್ಥಿಕ ಬಿಕ್ಕಟ್ಟಿನ ಜ್ವಾಲೆಗೆ ಸಿಲುಕಿದ್ದು, ಶೀಘ್ರವೇ ವಂಶಾಡಳಿತ ಅಂತ್ಯಗೊಳ್ಳಲಿದೆ ಎನ್ನಲಾಗುತ್ತಿದೆ.

ಭಾನುವಾರ ತಡರಾತ್ರಿವರೆಗೂ ಲಂಕಾ ಸರ್ಕಾರದಲ್ಲಿ “ರಾಜಪಕ್ಸ’ ಕುಟುಂಬದ ಐವರು ಸದಸ್ಯರು ಹುದ್ದೆಯಲ್ಲಿದ್ದರು. ಅಧ್ಯಕ್ಷ ಗೋಟಬಯ ರಾಜಪಕ್ಸ (ರಕ್ಷಣಾ ಸಚಿವ), ಪ್ರಧಾನಿ ಮಹೀಂದ್ರಾ ರಾಜಪಕ್ಸ, ನೀರಾವರಿ ಸಚಿವ ಚಾಮಲ್‌ ರಾಜಪಕ್ಸ, ವಿತ್ತ ಸಚಿವ ಬಾಸಿಲ್‌ ರಾಜಪಕ್ಸ, ಕ್ರೀಡಾ ಸಚಿವ ನಮಲ್‌ ರಾಜಪಕ್ಸ, ಅಲ್ಲದೆ ಇನ್ನೂ ಕೆಲವು ರಾಜಪಕ್ಸಂದಿರು ಸರ್ಕಾರದಲ್ಲಿದ್ದರು. ಬಾಸಿಲ್‌ ರಾಜಪಕ್ಸ ಸೇರಿ 26 ಸಚಿವರ ರಾಜೀನಾಮೆ ಬಳಿಕವೂ ಆಕ್ರೋಶಗಳು ನಿಲ್ಲುವ ಲಕ್ಷಣ ತೋರುತ್ತಿಲ್ಲ.

Advertisement

“ಸ್ವಾತಂತ್ರ್ಯ ನಂತರ ದೇಶವನ್ನು ಹಿಂದೆಂದೂ ಕಂಡು ಕೇಳರಿಯದಂತೆ ಅಧಃಪತನಕ್ಕೆ ತಳ್ಳಿದ ವಂಶಾಡಳಿತ ಇದು’ ಎಂದು ಪ್ರತಿಭಟನಾಕಾರರು, ರಾಜಪಕ್ಸ ಕುಟುಂಬಸ್ಥರ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಏಕತೆಯ ಸರ್ಕಾರಕ್ಕೆ ಆಹ್ವಾನ ಕೊಟ್ಟ ಗೋಟಬಯ
ಬಹುತೇಕ ಸಚಿವರ ರಾಜೀನಾಮೆ ನೀಡಿದ್ದಾಗ್ಯೂ, ಅಧಿಕಾರ ತ್ಯಜಿಸಲು ಮೀನಾಮೇಷ ಎಣಿಸುತ್ತಿರುವ ಅಧ್ಯಕ್ಷ ಗೋಟಬಯ ರಾಜ ಪಕ್ಸ, ಸೋಮವಾರ ವಿಪಕ್ಷಗಳ ಮೂಗಿಗೆ ಏಕತೆಯ ಸರ್ಕಾರದ ಬೆಣ್ಣೆ ಸವರಿದ್ದಾರೆ. “ದೇಶದ ಆರ್ಥಿಕತೆ ವಿಷಮ ಸ್ಥಿತಿ ತಲುಪಿರುವ ಈ ಹೊತ್ತಿನಲ್ಲಿ ಎಲ್ಲರೂ ಕೈಜೋಡಿಸಿ, ಸರ್ವ ಪಕ್ಷಗಳನ್ನೊಳಗೊಂಡ ಏಕತೆಯ ಸರಕಾರ ರಚಿಸೋಣ. ಲಂಕಾದ ಬಿಕ್ಕಟ್ಟಿಗೆ ಪರಿಹಾರ ಹುಡುಕೋಣ’ ಎಂದು ಕರೆಕೊಟ್ಟಿದ್ದಾರೆ. ಆದರೆ, ಅವರ ಕರೆಯನ್ನು ವಿಪಕ್ಷಗಳು ತಿರಸ್ಕರಿಸಿವೆ.

ಏತನ್ಮಧ್ಯೆ, ದೇಶದ ಸ್ಥಿತಿ ಸಹಜ ಸ್ಥಿತಿಗೆ ಮರಳು ವವರೆಗೆ ನಾಲ್ವರು ಸಚಿವರನ್ನೊಳಗೊಂಡ ಸಂಪುಟವನ್ನು ಕಾಯ್ದುಕೊಳ್ಳಲು ರಾಜಪಕ್ಸ ಸರ್ಕಾರ ತೀರ್ಮಾನಿಸಿದೆ. ಬಾಸಿಲ್‌ ರಾಜಪಕ್ಸ ರಾಜೀನಾಮೆ ಬಳಿಕ ತೆರವಾದ ಸ್ಥಾನಕ್ಕೆ ನೂತನ ವಿತ್ತಮಂತ್ರಿಯಾಗಿ ಅಲಿ ಸಾಬ್ರಿ ಅವರನ್ನು ನೇಮಿಸಲಾಗಿದೆ. ವಿಪಕ್ಷಗ ಳೊಂದಿಗೆ ಚರ್ಚಿಸಿ, ಇನ್ನಷ್ಟು ಸಚಿವ ಹುದ್ದೆಗಳನ್ನು ಭರ್ತಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಇತ್ತ ಲಂಕಾದ ಷೇರು ಮಾರುಕಟ್ಟೆ ಪಾತಾಳ ಕಂಡಿದೆ.

ತವರಿನ ಬಗ್ಗೆ ಕ್ರಿಕೆಟಿಗರ ಕಂಬನಿ
ಆರ್ಥಿಕ ಬಿಕ್ಕಟ್ಟಿನ ಬೆಂಕಿ, ಹಸಿವಿನ ರಣಕೇಕೆಯಿಂದ ಕಂಗೆಟ್ಟಿರುವ ತವರು ನೆಲದ ಬಗ್ಗೆ, ಐಪಿಎಲ್‌ನಲ್ಲಿರುವ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಮತ್ತು ಬ್ಯಾಟಿಂಗ್‌ ಸ್ಟಾರ್‌ ಭಾನುಕಾ ರಾಜಪಕ್ಸ ತೀವ್ರ ಕಳವಳ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next